ಬೆಂಗಳೂರು : ಹಿಂದೂಗಳ ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬ ಆಚರಿಸಲಾಗುತ್ತಿದೆ. ಯುಗಾದಿ ಹಬ್ಬದಂದೇ ದೇಶಾದ್ಯಂತ ರಂಜಾನ್ ಚಾಂದ್ (ಚಂದ್ರ ದರ್ಶನ) ಕಾಣಿಸಿಕೊಂಡಿದ್ದು, ಮರುದಿನವೇ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಬಾಂಧವರಿಗೆ ಶುಭ ಕೋರಿದ್ದಾರೆ.
ಶ್ರದ್ಧಾ ಭಕ್ತಿಯ ಪ್ರತೀಕವಾದ ರಂಜಾನ್ ಹಬ್ಬವು ನಾಡಿನಲ್ಲಿ ಸುಖ, ಶಾಂತಿ, ಸೌಹಾರ್ದತೆಯು ನೆಲೆಗೊಳ್ಳಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು ಎಂದು ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಶುಭಕೋರಿದ್ದಾರೆ.
ರಂಜಾನ್ ಹಿನ್ನೆಲೆ ಬೆಂಗಳೂರಿನ ಚಾಮರಾಚಪೇಟೆಯಲ್ಲಿರೋ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಮುಸ್ಲಿಂ ಬಾಂಧವರು ನಮಾಜ್ ಮಾಡಿ ರಂಜಾನ್ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಅಲ್ಲದೇ ಸಿಎಂ ಈದ್ಗಾ ಮೈದಾನದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ರಂಜಾನ್ ಆಚರಣೆಗೂ ಮುನ್ನ ಈ ಮಾಸದಲ್ಲಿ ಮುಸ್ಲಿಮರು 30 ದಿನ ಉಪವಾಸ ಆಚರಿಸುವ ಜೊತೆಗೆ ದಾನ-ಧರ್ಮ, ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಸ್ಲಾಮಿನ ತರಾವೀಹ್, ನಮಾಜ್, ಉಪವಾಸ, ಝಕಾತ್ (ದಾನ), ಹಜ್ ಎಂಬ ಪಂಚಕರ್ಮಗಳನ್ನು ನೇರವೇರಿಸುವ ರಂಜಾನ್ ಪುಣ್ಯ ಸಂಪಾದಿಸುವ ಮಾಸ ಎನ್ನಲಾಗಿದೆ.