ಚಿತ್ರದುರ್ಗ: 2023-24 ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ದಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 29 ಅರ್ಜಿ ಸಲ್ಲಿಸಲು ಕೊನೆ ದಿನ.
ಗಂಗಾ ಕಲ್ಯಾಣ ಯೋಜನೆ, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ, ಭೂ ಒಡೆತನ ಯೋಜನೆ ಸೇರಿದಂತೆ ಒಟ್ಟು ನಾಲ್ಕು ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗಂಗಾಕಲ್ಯಾಣ ಯೋಜನೆ: ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಖುಷ್ಕಿ, ಒಣ (1:20 ಎಕರೆಯಿಂದ 5 ಎಕರೆ ಒಳಪಟ್ಟಿರಬೇಕು) ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.
ಸ್ವಯಂ ಉದ್ಯೋಗ ನೇರಸಾಲ ಯೋಜನೆ: ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು, ನೇರಸಾಲ: ಸಣ್ಣ ಆದಾಯಗಳಿಸುವ ಆರ್ಥಿಕ ಚಟುವಟಿಕೆಗಳಿಗಾಗಿ ಘಟಕ ವೆಚ್ಚ ಗರಿಷ್ಠ ರೂ.1ಲಕ್ಷ ಇದರಲ್ಲಿ 50% ಸಾಲ ಮತ್ತು 50% ಸಹಾಯಧನ. ಉದ್ಯಮಶೀಲತಾ ಅಭಿವೃದ್ದಿ ಯೋಜನೆ: ಘಟಕ-1 ವ್ಯಾಪಾರ ಇತರೆ ಉದ್ಯಮಗಳಿಗೆ ಸಹಾಯಧನ ಗರಿಷ್ಠ ರೂ.1 ಲಕ್ಷ ಉಳಿದ ಮೊತ್ತ ಬ್ಯಾಂಕ್‍ನಿಂದ ಸಾಲ ನೀಡಲಾಗುವುದು. ಘಟಕ-2 ವ್ಯಾಪಾರ ಇತರೆ ಉದ್ಯಮಗಳಿಗೆ ಸಹಾಯಧನ ಗರಿಷ್ಠ ರೂ.2 ಲಕ್ಷ ಉಳಿದ ಮೊತ್ತ ಬ್ಯಾಂಕ್‍ನಿಂದ ಸಾಲ ನೀಡಲಾಗುವುದು.
ಸ್ವಾವಲಂಬಿ ಸಾರಥಿ ಯೋಜನೆ: ಸರಕು ಸಾಗಣಿಕೆ, ಟ್ಯಾಕ್ಸಿ (ಹಳದಿ ಬೋರ್ಡ್ ವಾಹನ) ಖರೀದಿಗಾಗಿ ಘಟಕ ವಚ್ಚದಲ್ಲಿ 75% ರಷ್ಟು ಸಹಾಯಧನ(4 ಲಕ್ಷ) ನೀಡಲಾಗುವುದು.
ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ: ಮಹಿಳೆಯರಲ್ಲಿ ಗುಂಪು ಚಟುವಟಿಕೆಳಿಗೆ ಉತ್ತೇಜನ ನೀಡಲು ನೋಂದಾಯಿತ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆದಾಯಗಳಿಸಲು ಅನುವಾಗುವಂತೆ ಕನಿಷ್ಠ 10 ಸದ್ಯಸರಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಗರಿಷ್ಠ ರೂ 2.50 ಲಕ್ಷಗಳನ್ನು ಮಂಜೂರು ಮಾಡಲಾಗುವುದು ಇದರಲ್ಲಿ ರೂ.1.50 ಲಕ್ಷ ಸಹಾಯ ಧನ ಮತ್ತು ರೂ 1ಲಕ್ಷ ಸಾಲ ನೀಡಲಾಗುವುದು.
ಭೂ ಒಡೆತನ ಯೋಜನೆ: ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕನಿಷ್ಠ 0.20 ಎಕರೆ ಮೇಲ್ಪಟ್ಟು ಘಟಕ ವೆಚ್ಚದಲ್ಲಿ ಗರಿಷ್ಠ ಎಷ್ಟು ವಿಸ್ತೀರ್ಣ ಬರುತ್ತದೆಯೋ ಅಷ್ಟು ಜಮೀನನ್ನು ಖರೀದಿಸಿ, ಗರಿಷ್ಠ ಘಟಕ ವೆಚ್ಚ 20 ಲಕ್ಷದವರೆಗೂ ಕೊಡಲಾಗುವುದು.
ಆಯಾ ನಿಗಮಗಳಿಗೆ ಸಂಬಂಧಿಸಿದ, ವ್ಯಾಪ್ತಿಗೆ ಒಳಪಡುವ ಉಪಜಾತಿಯ ಫಲಾಪೇಕ್ಷಿಗಳು ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ. ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿತ್ತಾರೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.