ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಕೊಲೆಗಡುಕರ ಪರ ಇದೆ. ಕೊಲೆಗಡುಕರಿಗೆ ರಾಜ್ಯದಲ್ಲಿ ಭಯ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಟ ದರ್ಶನ್ ಇರುವ ಠಾಣೆಗೆ ರಕ್ಷಣೆ ಕೊಡಲಾಗಿದೆ. ಜನರಿಗೊಂದು ಕಾನೂನು, ದೊಡ್ಡವರಿಗೊಂದು ಕಾನೂನು, ಕಾಂಗ್ರೆಸ್ ಕಾರ್ಯಕರ್ತರಿಗೊಂದು ಕಾನೂನು ಎಂಬ ಸಂದೇಶವನ್ನು ರಾಜ್ಯ ಸರ್ಕಾರ ಸಾರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಸರ್ಕಾರ ಕ್ರಮ ವಹಿಸಲಿ. ಕೊಲೆಗಡುಕರ ರಕ್ಷಣೆಯನ್ನು ಸರ್ಕಾರ, ಪೊಲೀಸರು ಮಾಡಬಾರದು. ದರ್ಶನ್ ಕಾಂಗ್ರೆಸ್ ಪರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದರು ಎಂದು ಅವರನ್ನು ಶಾಮಿಯಾನ ಹಾಕಿ ರಕ್ಷಣೆ ಮಾಡುತ್ತಿದ್ದಾರಾ ಎಂದು ಅವರು ಪ್ರಶ್ನಿಸಿದರು.
ಬಿಎಸ್‌ವೈ ವಿರುದ್ಧದ ಪೋಕ್ಸೋ ಕೇಸ್ ವಿಚಾರವಾಗಿ ಮಾತನಾಡಿದ ಅವರು, ಈ ಕೇಸಿನ ಮಾಹಿತಿ ನನಗಿಲ್ಲ. ಮಾಧ್ಯಮದ ಮೂಲಕ ಅಷ್ಟೇ ನೋಡಿದ್ದೇನೆ. ಯಡಿಯೂರಪ್ಪ ಅವರ ಸುದೀರ್ಘವಾದ ರಾಜಕಾರಣ ನೋಡಿದ್ದೇನೆ. ಇದರಲ್ಲಿ ಸರ್ಕಾರದ ಪಾತ್ರದ ಬಗ್ಗೆ ಗೊತ್ತಿಲ್ಲ. ಕೋರ್ಟ್ ನೆಲದ ಕಾನೂನು ಎತ್ತಿ ಹಿಡಿಯಲಿದೆ. ಯಡಿಯೂರಪ್ಪ ವಿರುದ್ಧದ ಪ್ರಕರಣ ಜನ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ರೀತಿಯ ಆರೋಪಗಳು ಯಡಿಯೂರಪ್ಪ ವಿರುದ್ಧ ಈ ಹಿಂದೆ ಎಂದೂ ಕೇಳಿ ಬಂದಿರಲಿಲ್ಲ. ಈಗ ಯಾಕೆ ಅವರ ಬಗ್ಗೆ ಈ ರೀತಿಯ ಆರೋಪಗಳು ಕೇಳಿಬರುತ್ತಿವೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲರ ಮೇಲೆ ಕೇಸ್ ಹಾಕುವಂತಹ ಪ್ರಕರಣಗಳನ್ನು ಕೂಡಾ ಜನ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.