ಹಾಸನ : ಕಾಂಗ್ರೆಸ್ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ. ಸರ್ಕಾರ ಪಾಪರ್ ಆಗಿದೆ. ಕಳೆದ ಆರೇಳು ತಿಂಗಳಿನಿಂದ ಅದೇ ಸ್ಥಿತಿಯಲ್ಲಿದೆ. ಈಗ ಗ್ಯಾರೆಂಟಿಗಾಗಿ ಟ್ಯಾಕ್ಸ್ ಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ಪರಿಶೀಲನೆ ನಡೆಸಿದ ಅವರು, ನಾನೇ ಸರ್ಕಾರಕ್ಕೆ ಹೇಳಿದ್ದೇನೆ. ಒಕ್ಕಲಿಗರ ನಿಗಮ, ಬ್ರಾಹ್ಮಣರು, ಲಿಂಗಾಯಿತರು ನಿಗಮದ ಹಣ ಇದೆ ಎಲ್ಲವನ್ನೂ ಬಳಸಿಕೊಳ್ಳಿ ಎಂದಿದ್ದೇನೆ. ಸರ್ಕಾರ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಅದರಿಂದ ಹೊರಬರಲು ಅವರಿಗೆ ಆಗ್ತಿಲ್ಲ, ಅದಕ್ಕೆ ಅದರಲ್ಲಿ ಬ್ಯುಸಿ ಇದ್ದಾರೆ ಎಂದು ಹೇಳಿದರು.
ನಾನು ಕಂದಾಯ ಸಚಿವನಾಗಿ ಮಳೆಹಾನಿಗೆ ತುರ್ತು ಪರಿಹಾರ ನೀಡಿದ್ದೆ. ಇಲ್ಲಿ ಪರಿಹಾರ ಕೊಡಲು ಇನ್ನೂ ಶುರು ಮಾಡಿಲ್ಲ. ಕೇಂದ್ರ ಸರ್ಕಾರ ಕೊಟ್ಟಿರುವ ಹಣವನ್ನು ಇವರು ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟಿರುವುದನ್ನು ನೀಡಿ ಕೈಚೆಲ್ಲಿ ಕೂರಬಾರದು. ರಾಜ್ಯ ಸರ್ಕಾರ ಅದಕ್ಕೆ ಹೆಚ್ಚಿನ ಹಣ ಹಾಕಿ ಪರಿಹಾರ ನೀಡಬೇಕು ಎಂದರು.
ಎಸ್ಟಿಮೇಟ್ ಮಾಡದೇ ಗ್ಯಾರೆಂಟಿ ತಂದಿದ್ದಾರೆ. ಅದಕ್ಕೆ ಇವಾಗ ದಲಿತರ ಹಣ ಹುಡುಕುತ್ತಿದ್ದಾರೆ. ಈ ಸರ್ಕಾರ ಒಂದು ರೀತಿ ಕೋಮಾ ಸ್ಟೇಜ್‌ನಲ್ಲಿದೆ. ನಾನು ಒಂದು ಒಳ್ಳೆಯ ಸಲಹೆ ಕೊಡ್ತೇನೆ. ನಿಮಗೆ ಯಾವ್ಯಾವ ಜಾತಿ ಬೇಕು, ಸಂವಿಧಾನ ಬದಲಾವಣೆ ಮಾಡಿ ಬಿಡೋಣ. ಇಂತಹ ಜಾತಿಯವರು ಲೂಟಿ ಹೊಡೆದರೆ, ಅಕ್ರಮ ಮಾಡಿದರೆ, ಕಳ್ಳತನ ಮಾಡಿದ್ರೆ ಏನು ಕ್ರಮ ತೆಗೆದುಕೊಳ್ಳುವ ಆಗಿಲ್ಲ ಎಂದು ಕಾನೂನು ಮಾಡಿಬಿಡಿ ಎಂದು ತಿಳಿಸಿದರು.
ಈ ಜಾತಿಯವನಾದರೆ ಕಳ್ಳತನ ಮಾಡಬಹುದು, ಈ ಜಾತಿಯವನಾದರೆ ಕಳ್ಳತನ ಮಾಡಬಾರದು ಎಂದು ಸಂವಿಧಾನದಲ್ಲಿ ಇದೆಯಾ? ಈ ಸರ್ಕಾರ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಹೊರಗಡೆ ಬರಲು ಆಗುತ್ತಿಲ್ಲ, ದಾರಿ ಕಾಣದಾಗಿದೆ. ಎಲ್ಲಾ ದಲಿತರ ಹಣ ಉಪಯೋಗಿಸಿಕೊಳ್ಳುತ್ತಿದ್ದಾರೆ. ವಾಲ್ಮೀಕಿ, ಮುಡಾದಲ್ಲೂ ದಲಿತರ ಹಣವೇ. ದಲಿತರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ಈ ಸರ್ಕಾರ ಮಾಡಿದೆ. ರಾಜ್ಯ ಸರ್ಕಾರಕ್ಕೆ ಮರ್ಯಾದೆ ಇಲ್ಲ, ತಪ್ಪಿಸಿಕೊಳ್ಳುವ ದಾರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.