ಮಂಗಳೂರು : ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ದಿ ಶೂನ್ಯ ಸರ್ಕಾರವಾಗಿದ್ದು, ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಕೇವಲ ಭ್ರಷ್ಟಾಚಾರದಲ್ಲೇ ಮುಳುಗಿರುವ ಸರ್ಕಾರವನ್ನು ವಜಾ ಮಾಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಪರಿಷತ್ ಉಪಚುನಾವಣೆಯ ಹಿನ್ನಲೆಯಲ್ಲಿ ಬಂಟ್ವಾಳದ ಬಂಟರ ಭವನದಲ್ಲಿ ನಡೆದಿದ್ದ ಮತದಾರರ ಸಮಾವೇಶಕ್ಕೆ ಆಗಮಿಸಿದ್ದ ಅವರು ಪತ್ರಿಕಾಗೋಷ್ಟಿಯಲ್ಲಿ ಈ ವಿಚಾರ ತಿಳಿಸಿದ್ದಾರೆ.
ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ದಿ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿಲ್ಲ. ಅನುದಾನ ಬಿಡುಗಡೆಯಾಗದೆ ಶಾಸಕರು ಗುದ್ದಲಿ ಪೂಜೆ ಮಾಡಲು ಕೂಡ ಸಾಧ್ಯವಾಗಿಲ್ಲ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಶಾಸಕರೇ ಅನುದಾನ ಸಿಗದೆ ಕ್ಷೇತ್ರಕ್ಕೆ ಹೋಗಲು ಅಸಾಧ್ಯವಾಗಿದೆ ಎಂದು ಆರೋಪ ಮಾಡಿದ್ದಾರೆ.
ಸರ್ಕಾರ ಕೇವಲ ಭ್ರಷ್ಟಾಚಾರದಲ್ಲಿ ನಿರತವಾಗಿದ್ದು, ಸ್ವತಃ ಸಿಎಂ ಸಿದ್ಧರಾಮಯ್ಯ ಅವರೇ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಇಂತಹ ಸರ್ಕಾರವನ್ನು ಕಿತ್ತೊಗೆಯುವ ತನಕ ಬಿಜೆಪಿ ನಿರಂತರ ಹೋರಾಟ ಮಾಡಲಿದೆ ಎಂದು ವಿಜಯೇಂದ್ರ ಗುಡುಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ , ಪಕ್ಷದ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.