ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ ಎನ್ನುವ ಡಿಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ‘ನಾನು ಸವಾಲು ಸ್ವೀಕರಿಸುತ್ತೇನೆ. ನನ್ನ ಆರೋಗ್ಯ ಲೆಕ್ಕಿಸದೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಡಿ.ಕೆ ಶಿವಕುಮಾರ್ ಬೆಂಗಳೂರು ಮೂಲದವರಲ್ಲ. ಬೆಂಗಳೂರು ಇಡೀ ಕರ್ನಾಟಕ ರಾಜ್ಯದ ಭಾಗ. ಬೆಂಗಳೂರಿನ ಆರ್ಥಿಕ ಶಕ್ತಿ ಇಡೀ ಕರ್ನಾಟಕ ಅಭಿವೃದ್ಧಿಗೆ ಕಾರಣ’ ಎಂದು ವಾಗ್ದಾಳಿ ನಡೆಸಿದರು. ನಾನು ಹುಟ್ಟಿದ್ದು ಹಾಸನ ಆದರೂ ನನ್ನ ಜೀವನ ಅಂತ್ಯ ಆಗುವುದು ರಾಮನಗರದಲ್ಲೇ. ನನ್ನ ಹೋರಾಟಕ್ಕೆ ರಾಮನಗರದ ಜನರ ಸಹಕಾರ ಕೇಳುತ್ತೇನೆ. ನಮ್ಮ ಸಮಾಜದವರು ಹೇಳಿದ್ರು ಅಂತ ಸುಮ್ಮನೆ ಇದ್ದೆ ಎನ್ನುವ ಡಿಕೆ ಹೇಳಿಕೆ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಎಲ್ಲವು ಜನರೇ ತೀರ್ಮಾನ ಮಾಡುತ್ತಾರೆ.ನನ್ನ ತಂದೆಯವರ ಹತ್ತಿರ ಪಂಚೆ, ಜುಬ್ಬಾ ಬಿಟ್ಟರೇ ಬೇರೆ ಏನೂ ಇಲ್ಲ. ನಾವು ಹಣ ಮಾಡಿದ್ದೇವೆ, ಆದರೆ ಲೂಟಿ ಹೊಡೆದು ಹಣ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಎಷ್ಟೆಲ್ಲಾ ಕೆರೆ-ಕಟ್ಟೆ ನುಂಗಿ ಹಾಕಿದ್ದೀರಾ? ಯಾವ್ ಯಾವ್ ಕೆರೆ ನುಂಗಿದ್ದೀರಾ ಪಟ್ಟಿ ಬೇಕಾ? ಯಾವ ಮುಖ ಇಟ್ಟುಕೊಂಡು ಕೆಂಪೇಗೌಡರ ಹೆಸರು ಹೇಳ್ತೀರಾ? ಈ ಬಗ್ಗೆ ಚರ್ಚೆ ನಡೆಸಲು ಪಾಪ ಅವರು ಬ್ಯುಸಿ ಇದ್ದಾರೆ. ಅವರು ಯಾವಾಗ ಬೇಕಾದರೂ ಸಮಯ ಫಿಕ್ಸ್ ಮಾಡಲಿ ಎಂದು ಡಿಕೆಶಿಗೆ ತಿರುಗೇಟು ನೀಡಿದರು. ಕನಕಪುರ ಸ್ಕೂಲ್‌ಗಳಲ್ಲಿ ಎಷ್ಟು ಟೀಚರ್ ಇಲ್ಲ ನೋಡಿ. ಭೂಮಿ ದಾನ ಕೊಟ್ಟಿದ್ದೇವೆ ಅಂತಾರೆ. ನಾನು ನೋಡಿದ್ದೇನೆ ಎಷ್ಟು ಕೊಟ್ಟಿದ್ದಾರೆ ಎನ್ನುವುದನ್ನು. ದಾಖಲಾತಿ ಹೇಗೆ ಮಾಡಿಕೊಂಡಿದ್ದೀರಾ ನಮಗೆ ಗೊತ್ತಿದೆ. ಕನಕಪುರದಲ್ಲಿ ಒಬ್ಬ ಟೀಚರ್ ಜಾಗದಲ್ಲಿ ಡಿಕೆ ಶಿವಕುಮಾರ್ ಪಟಾಲಂ ಇದ್ದ. 10 ವರ್ಷ ಆದರೂ ಬಿಡಿಸಲು ಆಗಿಲ್ಲ ಎಂದು ಕಿಡಿಕಾರಿದರು.