ಉತ್ತರ ಪ್ರದೇಶ: ರಾಷ್ಟ್ರ ಧ್ವಜವನ್ನು ನೆಲಕ್ಕೆ ಹಾಸಿ ಕಿಡಿಗೇಡಿಗಳು ಇಸ್ಪೀಟ್ ಆಟ ಆಡಿದ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಲಕ್ಷ್ಮಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ನದಿಯ ಸಮೀಪದಲ್ಲಿ ನಡೆದಿದೆ.
ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧವೆಂದು ಗೊತ್ತಿದ್ದರೂ ಯಮುನಾ ನದಿಯ ಸಮೀಪದಲ್ಲಿ ಒಂದಷ್ಟು ಜನ ರಾಷ್ಟ್ರ ಧ್ವಜವನ್ನು ನೆಲಕ್ಕೆ ಹಾಸಿ ಅದರ ಮೇಲೆ ಇಸ್ಪೀಟ್ ಆಡುವ ಮೂಲಕ ಅವಮಾನ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿಡಿಯೋ ಆಧರಿಸಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದವರ ಗುಂಪಿನಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು, ಮತ್ತೊಬ್ಬ ವ್ಯಕ್ತಿ ಅಲ್ಲಿನ ವಿದ್ಯುತ್ ಇಲಾಖೆಯ ಎಸ್ ಡಿಒ ಚಾಲಕ. ಉಳಿದ ಇಬ್ಬರು ಸ್ಥಳೀಯರು. ಈ ನಾಲ್ಕು ಜನ ಧ್ವಜವನ್ನು ನೆಲದ ಮೇಲೆ ಹಾಸಿ ಚಪ್ಪಲಿ, ಶೂ ಹಾಕಿಕೊಂಡೇ ಇಸ್ಪೀಟ್ ಆಡುವ ಮೂಲಕ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ್ದಾರೆ. ಇದೀಗ ಈ ನಾಲ್ವರ ವಿರುದ್ಧ ಜಮುನಾಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.