ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಬಾರಿ ದೀಪಾವಳಿಗೂ ಮುನ್ನವೇ ಗಾಳಿ ಗುಣಮಟ್ಟ ತೀರಾ ಹದಗೆಟ್ಟಿದ್ದು, ಉಸಿರುಗುಟ್ಟುವ ಕಳಪೆ ವಾಯು ಗುಣಮಟ್ಟದಿಂದಾಗಿ ವಾಯು ತುರ್ತುಸ್ಥಿತಿಯನ್ನು ಘೋಷಿಸಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಪ್ರಾಥಮಿಕ ಶಾಲೆಗಳಿಗೆ ಶುಕ್ರವಾರ ಮತ್ತು ಶನಿವಾರ ರಜೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಅನಿವಾರ್ಯವಲ್ಲದ ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ದೆಹಲಿ ಸರ್ಕಾರ ತಡೆ ಹಾಕಿದ್ದು, ದೆಹಲಿ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುಧ್ ನಗರದಲ್ಲಿ ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡೀಸೆಲ್ ಕಾರುಗಳ ಓಡಾಟದ ಮೇಲೆ ನಿಷೇಧ ಹೇರಿದೆ. ಹವಾಮಾನ ಇಲಾಖೆಯ ಪ್ರಕಾರ ಶುಕ್ರವಾರ ಬೆಳಿಗ್ಗೆ, ದೆಹಲಿಯ ಒಟ್ಟಾರೆ AQI ʼಅತ್ಯಂತ ಕಳಪೆ’ ವಿಭಾಗದಲ್ಲಿ 346ನಲ್ಲಿ ದಾಖಲಾಗಿದೆ. ಇನ್ನು ರಸ್ತೆ ಸ್ವಚ್ಛತೆ ವೇಳೆ ಏಳುವ ಧೂಳಿನ ಕಣಗಳ ನಿಯಂತ್ರಣಕ್ಕೆ ಸರ್ಕಾರ ರಸ್ತೆಗಳ ಮೇಲೆ ಮೊದಲು ನೀರು ಚುಮುಕಿಸಿ ಬಳಿಕ ರಸ್ತೆ ಸ್ವಚ್ಛ ಮಾಡುವ ಕಾರ್ಯ ಮಾಡುತ್ತಿದೆ. ಇದರಿಂದ ಧೂಳಿನಕಣಗಳು ಏಳದಂತೆ ಎಚ್ಚರವಹಿಸಲಾಗುತ್ತಿದೆ. ಹದಗೆಡುತ್ತಿರುವ ವಾಯು ಗುಣಮಟ್ಟ ಸೂಚ್ಯಂಕದ ಹಿನ್ನೆಲೆಯಲ್ಲಿ ಗುರುಗ್ರಾಮದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.