ಬೆಂಗಳೂರು: ಪೆನ್ ಡ್ರೈವ್ ಪ್ರಕರಣದಲ್ಲಿ 16 ವರ್ಷದ ಸಂತ್ರಸ್ತರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.ಹೀಗಾಗಿ ಯಾಕೆ ಎಸ್‌ಐಟಿ ರಾಹುಲ್ ಗಾಂಧಿಗೆ ನೋಟಿಸ್ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಹುಲ್ ಗಾಂಧಿ ಮಹಾನುಭವ ಈ ಪ್ರಕರಣದಲ್ಲಿ 16 ವರ್ಷದ ಅಪ್ರಾಪ್ತರು ಇದ್ದಾರೆ ಎಂದು ಹೇಳಿದ್ದಾರೆ. ಇದು ಗಂಭೀರ ಆರೋಪ. ಪೋಕ್ಸೋ ಪ್ರಕರಣ ಸಾಬೀತಾದರೆ ಜೀವನಪರ್ಯಂತ ಜೈಲು ಶಿಕ್ಷೆಯಾಗುತ್ತದೆ. ಆದರೆ ಇಲ್ಲಿಯವರೆಗೆ ಯಾವುದೇ ಅಪ್ರಾಪ್ತರು ಹೇಳಿಕೆ ನೀಡಿಲ್ಲ ಯಾಕೆ? ಯಾವ ಆಧಾರದಲ್ಲಿ ರಾಹುಲ್ ಗಾಂಧಿ ಹೇಳಿಕೆ ಕೊಟ್ಟ ಎಂದು ಪ್ರಶ್ನಿಸಿ ಏಕವಚನದಲ್ಲೇ ಕುಮಾರಸ್ವಾಮಿ ಕಿಡಿಕಾರಿದರು
ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದಾಗ ಪ್ರಕರಣದ ವಿಚಾರಣೆಗೆ ಸಾಕ್ಷಿಯನ್ನಾಗಿ ಪರಿಗಣಿಸಿ ಅವರನ್ನು ಕರೆಯಬೇಕಿತ್ತು. ಎಸ್‌ಐಟಿ ಯಾಕೆ ಇನ್ನೂ ನೋಟಿಸ್ ನೀಡಿಲ್ಲ? ಈಗ ಪೋಕ್ಸೋ ಪ್ರಕರಣ ದಾಖಲು ಮಾಡಲು 16 ವರ್ಷದ ಅಪ್ರಾಪ್ತರನ್ನು ಹುಡುಕಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.