ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ದರೋಡೆಕೋರ ಎಂದು ಬಿಂಬಿಸುವ ಕಾಲ್ಪನಿಕ ವಿಡಿಯೋವನ್ನು ತೆಗೆದುಹಾಕುವಂತೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಗುಣಮಟ್ಟ ಪ್ರಾಧಿಕಾರವು (ಎನ್‌ಬಿಡಿಎಸ್‌ಎ) ಗುರುವಾರ ಹಿಂದಿ ಸುದ್ದಿ ವಾಹಿನಿ ಆಜ್ ತಕ್‌ಗೆ ನಿರ್ದೇಶಿಸಿದೆ.
ಕಾಲ್ಪನಿಕ ವಿಡಿಯೋವು ಉತ್ತಮ ಅಭಿರುಚಿ ಹೊಂದಿಲ್ಲ, ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ, ಅದನ್ನು ತೆಗೆದುಹಾಕಬೇಕು. ಆ ವಿಡಿಯೋವನ್ನು ತನ್ನ ಚಾನೆಲ್, ಯೂಟ್ಯೂಬ್ ಮತ್ತು ಇತರ ಆನ್‌ಲೈನ್ ವೇದಿಕೆಗಳಿಂದ ತೆಗೆದುಹಾಕಬೇಕು ಎಂದು ಎನ್‌ಬಿಡಿಎಸ್‌ಎ ಆದೇಶಿಸಿದೆ.
ಈ ವಿಡಿಯೋವನ್ನು ಮಾರ್ಚ್ 24, 2023ರಂದು ‘ಬ್ಲ್ಯಾಕ್ ಅಂಡ್ ವೈಟ್’ ಎಂಬ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿತ್ತು.’ಎಲ್ಲ ಕಳ್ಳರಿಗೂ ಮೋದಿ ಉಪನಾಮವಿದೆ’ ಎಂಬ ಹೇಳಿಕೆಗಾಗಿ ಮಾನಹಾನಿ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯವು ಮಾರ್ಚ್ 23, 2023 ರಂದು ದೋಷಿ ಎಂದು ಘೋಷಿಸಿದ ನಂತರ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿತ್ತು.
ಚಾನೆಲ್‌ನ ವೆಬ್‌ಸೈಟ್ ಅಥವಾ ಯೂಟ್ಯೂಬ್‌ನಲ್ಲಿ ಆ ವಿಡಿಯೋ ಲಭ್ಯವಿದ್ದರೆ ವಿಡಿಯೋವನ್ನು ತೆಗೆದುಹಾಕುವುದರ ಜೊತೆಗೆ ಈ ಕುರಿತು ಆದೇಶಿಸಿದ 7 ದಿನಗಳಲ್ಲಿ ಎನ್‌ಬಿಡಿಎಸ್‌ಎಗೆ ಲಿಖಿತವಾಗಿ ದೃಢೀಕರಿಸಬೇಕು ಎಂದು ಎನ್‌ಬಿಡಿಎಸ್‌ಎ ನಿರ್ದೇಶಿಸಿದೆ.