ಉತ್ತರ ಪ್ರದೇಶ : 18 ವರ್ಷಗಳಿಂದ ದೂರವಿದ್ದ ಅಣ್ಣ-ತಂಗಿ ಇನ್ಸ್ಟಾಗ್ರಾಂ ರೀಲ್ಸ್ನಿಂದಾಗಿ ಮತ್ತೆ ಒಂದಾಗಿರುವ ವಿಚಿತ್ರ ಮತ್ತು ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಈ ಅಪರೂಪದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ತಂಗಿಯೊಬ್ಬಳು 18 ವರ್ಷಗಳ ನಂತರ ಕಳೆದುಹೋದ ತನ್ನ ಅಣ್ಣನನ್ನು ಇನ್‌ಸ್ಟಾಗ್ರಾಮ್ ರೀಲ್ ಮೂಲಕ ಪತ್ತೆಹಚ್ಚಿದ್ದಾಳೆ. ಆತನ ಮುಖಭಾವ, ಒಡೆದು ಹೋಗಿದ್ದ ಹಲ್ಲುಗಳ ಆಧಾರದಲ್ಲಿ ತನ್ನ ಅಣ್ಣನೇ ಅಂತಾ ಪತ್ತೆಹಚ್ಚಿದ್ದಾಳೆ. ಬಳಿಕ ಅವನನ್ನು ಸಂಪರ್ಕಿಸಿ ಆತನ ಹಣೆಗೆ ತಿಲಕವಿಟ್ಟು ಮನೆಗೆ ಬರಮಾಡಿಕೊಂಡಿದ್ದಾಳೆ.
18 ವರ್ಷಗಳ ಹಿಂದೆ, ಬಾಲ್ ಗೋವಿಂದ್ ಫತೇಪುರ್‌ನ ಇನಾಯತ್‌ಪುರ ಗ್ರಾಮದಿಂದ ಮುಂಬೈಗೆ ಉದ್ಯೋಗಕ್ಕಾಗಿ ತೆರಳಿದ್ದ. ನಂತರ ಮನೆಗೆ ಹಿಂತಿರುಗಲಿಲ್ಲ. ಮುಂಬೈ ತಲುಪಿದ ನಂತರ ಸ್ನೇಹಿತರನ್ನು ಬಿಟ್ಟು ಬೇರೆ ಸ್ಥಳದಲ್ಲಿ ಕೆಲಸ ಆರಂಭಿಸಿದ್ದ. ಮನೆಯವರಿಗೆ ಆತನ ಸುಳಿವು ಕೂಡ ಸಿಕ್ಕಿರಲಿಲ್ಲ. ಅವನು ಆರಂಭದಲ್ಲಿ ತನ್ನ ಸ್ನೇಹಿತರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದನು. ಆದರೆ ಕ್ರಮೇಣ ಎಲ್ಲಾ ಸಂಪರ್ಕವನ್ನು ನಿಲ್ಲಿಸಿದನು. ಅವರ ಎಲ್ಲಾ ಸ್ನೇಹಿತರು ತಮ್ಮ ಹಳ್ಳಿಗೆ ಮರಳಿದರು, ಆದರೆ ಬಾಲ ಗೋವಿಂದ್ ಮುಂಬೈನಲ್ಲಿಯೇ ಉಳಿದುಕೊಂಡಿದ್ದ. ಅವನು ಎಲ್ಲಿದ್ದಾನೆಂದು ಯಾರಿಗೂ ಗೊತ್ತಿರಲಿಲ್ಲ.
ಬಳಿಕ ಒಂದು ದಿನ ಆತ ಮನೆಗೆ ಮರಳಿ ಬರಲು ರೈಲು ಹತ್ತಲು ನಿರ್ಧರಿಸಿದಾಗ ಆತನ ಜೀವನವು ಅನಿರೀಕ್ಷಿತ ತಿರುವು ಪಡೆಯಿತು. ರೈಲು ಆತನನ್ನು ಕಾನ್ಪುರದ ಬದಲು ಜೈಪುರಕ್ಕೆ ಕರೆದೊಯ್ಯಿತು. ಅಲ್ಲಿ ಬಾಲ ಗೋವಿಂದ್ ರೈಲ್ವೆ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು ಭೇಟಿಯಾದ. ಅಲ್ಲೇ ಕಾರ್ಖಾನೆಯಲ್ಲಿ ಕೆಲಸ ಪಡೆದ. ನಂತರ ಆತ ಜೈಪುರದಲ್ಲಿ ಜೀವನವನ್ನು ನಡೆಸಲು ಪ್ರಾರಂಭಿಸಿದ. ಅಲ್ಲಿ ಈಶ್ವರ ದೇವಿ ಎಂಬ ಹುಡುಗಿಯನ್ನು ವಿವಾಹವಾದ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬದುಕು ಸಾಕಷ್ಟು ತಿರುವುಗಳನ್ನು ಪಡೆದುಕೊಂಡರೂ ಆತನ ಮುರಿದ ಹಲ್ಲು ಹಾಗೆಯೇ ಇತ್ತು.
ಇತ್ತೀಚೆಗೆ ಆತ ಇನ್ಸ್ಟಾಗ್ರಾಂ ರೀಲ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದ. ಇದೇ ರೀಲ್ ಆತನಿಗೆ ಮತ್ತೆ ತಂಗಿಯನ್ನು ತಲುಪಲು ಕಾರಣವಾಯಿತು. ಆತನಿಗೆ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ನಂಬರ್ ಪಡೆದ ಆಕೆ ಅಣ್ಣನನ್ನು ಮನೆಗೆ ವಾಪಾಸ್ ಬರಲು ಮನವಿ ಮಾಡಿದಳು. ಅದಕ್ಕೆ ಬಾಲ ಗೋವಿಂದ್ ತಕ್ಷಣ ಒಪ್ಪಿಕೊಂಡಿದ್ದಾನೆ.