ಬೆಂಗಳೂರು: ರೀಲ್ಸ್ ಮಾಡಿದವರು ಕೆಲಸದಲ್ಲಿ ಇರಲು ಲಾಯಕ್ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸಾರಿಗೆ ಇಲಾಖೆಯ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ವೇಳೆ ರೀಲ್ಸ್ ಮಾಡಿದರೇ ಅಂತವರನ್ನು ಮುಲಾಜಿಲ್ಲದೆ ಅಮಾನತು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಚಾಲಕನೋರ್ವ ಛತ್ರಿ ಹಿಡಿದು ಬಸ್ ಓಡಿಸುತ್ತಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಧಾರವಾಡ ಘಟಕದ ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಸಂಚರಿಸುವ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಸಂಜೆ ಮಳೆ ಬರುತ್ತಿದ್ದಾಗ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಇದ್ದಾಗ ಚಾಲಕ ಛತ್ರಿ ಹಿಡಿದು ಬಸ್ ಚಲಾಯಿಸಿದ್ದರು. ಈ ದೃಶ್ಯವನ್ನು ನಿರ್ವಾಹಕಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನಿಖೆ ನಡೆಸಿ, ಇದು ಮನರಂಜನೆಗಾಗಿ ಮಾಡಿದ ವಿಡಿಯೋ ಎಂದು ಸ್ಪಷ್ಟನೆ ನೀಡಿತ್ತು.