ನಾವು ಇಂದು ಹೇಳಲು ಹೊರಟಿರುವ ನಾನ್ ವೆಜ್ ರೆಸಿಪಿ ಬಹಳ ಸುಲಭ ಹಾಗೇ ಅಷ್ಟೇ ರುಚಿಕರ ಮತ್ತೆ ಆರೋಗ್ಯಕ್ಕೂ ಒಳ್ಳೆಯದು. ನಿಮಗೆ ಈ ರೆಸಿಪಿ ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ. ಅಂದಹಾಗೆ ನಾನು ಹೇಳುತ್ತಿರುವುದು ಎಗ್ ಲಾಲಿಪಾಪ್ ಬಗ್ಗೆ, ನೀವು ಚಿಕನ್ ಲಾಲಿ ಪಾಪ್ ಬಗ್ಗೆ ಕೇಳಿರಬಹುದು ಒಂದು ವೇಳೆ ಎಗ್ ಲಾಲಿ ಪಾಪ್ ಬಗ್ಗೆ ಕೇಳಿರದಿದ್ದರೆ ಇಲ್ಲಿದೆ ಮಾಡುವ ವಿಧಾನ…
ಎಗ್ ಲಾಲಿಪಾಪ್
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆ-4, ಸಣ್ಣಗೆ ಹೆಚ್ಚಿದ ಈರುಳ್ಳಿ-2,ಮೆಣಸಿನ ಪುಡಿ-2ಚಮಚ, ಧನಿಯಾ ಪುಡಿ-ಅರ್ಧ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಪೆಪ್ಪರ್ ಪುಡಿ-1ಟೀ ಸ್ಪೂನ್, ಗರಂ ಮಸಾಲ-1ಚಮಚ, ಮೈದಾ ಹಿಟ್ಟು-1ಚಮಚ, ಬ್ರೆಡ್ ಕ್ರಮ್ಸ್-ಸ್ವಲ್ಪ, ಕರಿಯಲು -ಎಣ್ಣೆ, ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ-1, ಹಸಿ ಮೊಟ್ಟೆ-1, ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
ಮೊದಲಿಗೆ ಬೇಯಿಸಿದ ಮೊಟ್ಟೆಯನ್ನು ಸಿಪ್ಪೆಯನ್ನು ತೆಗೆದು ಚೆನ್ನಾಗಿ ತುರಿದುಕೊಳ್ಳಿ. ನಂತರ ಒಂದು ಬೌಲ್ ಗೆ ಹಾಕಿ ಅದಕ್ಕೆ ಹೆಚ್ಚಿದ ಈರುಳ್ಳಿ,ಹಸಿಮೆಣಸಿನ ಕಾಯಿ,ಗರಂ ಮಸಾಲ, ಧನಿಯಾ ಪುಡಿ,ಕೊತ್ತಂಬರಿ ಸೊಪ್ಪು,ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿರಿ. ಆ ಬಳಿಕ ಆ ಮಿಶ್ರಣಕ್ಕೆ ಒಂದು ಚಮಚ ಮೈದಾ ಹಿಟ್ಟನ್ನು ಸೇರಿಸಿ ಪುನಃ ಮಿಶ್ರಣ ಮಾಡಿಕೊಳ್ಳಿ.
ತದನಂತರ ಕೈಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ಸಣ್ಣ ಉಂಡೆಗಳನ್ನು ಕಟ್ಟಿಕೊಳ್ಳಿ. ನಂತರ ಒಂದು ಬೌಲ್ ಗೆ ಒಂದು ಹಸಿ ಮೊಟ್ಟೆ ಒಡೆದು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಪೆಪ್ಪರ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಮಾಡಿಟ್ಟ ಮೊಟ್ಟೆಯ ಉಂಡೆಗಳನ್ನು ಹಸಿ ಮೊಟ್ಟೆಯ ಮಿಶ್ರಣಕ್ಕೆ ಹಾಕಿ,ಬಳಿಕ ಅದನ್ನು ಬ್ರೆಡ್ ಕ್ರಮ್ಸ್ ನಲ್ಲಿ ಅದ್ದಿ, ನಂತರ ಬಿಸಿ ಎಣ್ಣೆಗೆ ಹಾಕಿ ಗೋಲ್ಡನ್ ಬ್ರೌನ್(ಕಂದು ಬಣ್ಣ) ಬರುವವರೆಗೆ ಡೀಪ್ ಫ್ರೈ ಮಾಡಿದರೆ ರುಚಿಕರವಾದ ಎಗ್ ಲಾಲಿಪಾವ್ ಸವಿಯಲು ಸಿದ್ಧ.