ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರ ತನಿಖೆಯನ್ನು ಟೀಕಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್, ‘ಪೊಲೀಸರೇ ಸಾಕ್ಷಿ ನಾಶ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ. ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ವೇಳೆ ಅವರು ಪೊಲೀಸರ ಮೇಲೆ ಈ ಗಂಭೀರ ಆರೋಪ ಮಾಡಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಇರುವ ಮಾಹಿತಿಗೂ, ಸಾಕ್ಷ್ಯಗಳು ನೀಡಿರುವ ಹೇಳಿಕೆಗಳಿಗೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ ಎಂದು ವಾದಿಸಿದ ನಾಗೇಶ್, ರಸ್ತೆ ಬದಿ ಮ್ಯಾಜಿಕ್ ಮಾಡುವವರು ಖಾಲಿ ಡಬ್ಬ ತೋರಿಸಿ ಮೊಲ ಇದೆ ಎನ್ನುತ್ತಾರಲ್ಲ, ಪೊಲೀಸರ ಈ ತನಿಖೆ ಸಹ ಹಾಗೆಯೇ ಇದೆ ಎಂದರು. ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಮಂಡಿಸಿದ ವಾದ ಈ ರೀತಿ ಇದೆ.. ‘ಜೂನ್ 14ರಂದು ವಿಳಂಬವಾಗಿ ಬಟ್ಟೆ, ಶೂ ವಶಕ್ಕೆ ಪಡೆಯಲಾಗಿದೆ, ಮೊದಲಿಗೆ ದರ್ಶನ್ ಬಿಟ್ಟ ಸ್ಥಳದಲ್ಲಿ ಶೂ ಇರಲಿಲ್ಲ, ಪತ್ನಿಯ ನೆಯಲ್ಲಿರಬಹುದೆಂದು ಹೇಳಿದ ಬಳಿಕ ಅಲ್ಲಿಗೆ ತೆರಳಿದರು, ನಂತರ ಪತ್ನಿ ಹಲವು ಶೂಗಳನ್ನು ಅಲ್ಲಿ ತಂದುಕೊಟ್ಟರು, ಇದರಲ್ಲಿ ಒಂದು ಶೂ ಅನ್ನು ರಿಕವರಿ ಮಾಡಿದ್ದಾರೆ, ಶೂ ಬಗ್ಗೆಯೇ ಸ್ಪಷ್ಟತೆ ಇಲ್ಲದಿರುವುದರಿಂದ ಇದಕ್ಕೆ ಮಾನ್ಯತೆ ಇಲ್ಲ, 37 ಲಕ್ಷ ಹಣದ ಬಗ್ಗೆಯೂ ಆರೋಪಪಟ್ಟಿಯಲ್ಲಿ ಉಲ್ಲೇಖವಿದೆ, ಮೇ 2ರಂದೇ ಈ ಹಣವನ್ನು ದರ್ಶನ್ಗೆ ನೀಡಲಾಗಿದೆ, ಈ ಹಣವನ್ನು ಮುಂದೆ ಸಾಕ್ಷಿಗಳಿಗೆ ನೀಡಲು ಇಟ್ಟಿದ್ದರೆಂದು ಹೇಳಲಾಗಿದೆ, ಮೇ 2ರಂದೇ ಬಂದ ಹಣವನ್ನು ಕೊಲೆಗೆಂದು ಇಡಲು ಸಾಧ್ಯವೇ?’ ಎಂದು ಸಿವಿ ನಾಗೇಶ್ ಪ್ರಶ್ನೆ ಮಾಡಿದರು. ಇಂಥಹಾ ವಸ್ತುಗಳನ್ನು ವಶಪಡಿಸಿಕೊಳ್ಳುವುದು ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವ ತೀರ್ಪಿನ ಪ್ರತಿಯನ್ನು ಸಿವಿ ನಾಗೇಶ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ಬಳಿಕ ಪೊಲೀಸರು ಜೂನ್ 9ರಂದೇ ಷೆಡ್ಗೆ ಹೋಗಿ ಕೆಲವು ವಸ್ತುಗಳನ್ನು ವಶಪಡೆದಿದ್ದಾರೆ ಎಂದು ಸಾಕ್ಷಿಗಳ ಹೇಳಿಕೆಯಲ್ಲಿ ದಾಖಲಾಗಿದೆ. ಆದರೆ ಜೂನ್ 12 ರಂದು ದರ್ಶನ್ ಅನ್ನು ಕರೆದುಕೊಂಡು ಹೋಗಿ ಮಹಜರು ಮಾಡಿದಾಗ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ ಎಂಬ ಅಂಶವನ್ನು ಸಹ ಸಿವಿ ನಾಗೇಶ್ ನ್ಯಾಯಾಲಯದ ಗಮನಕ್ಕೆ ತಂದರು. ಸಿವಿ ನಾಗೇಶ್ರ ಸುದೀರ್ಘ ವಾದವನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಶನಿವಾರ (ಅಕ್ಟೋಬರ್ 05) ಮಧ್ಯಾಹ್ನ 12:30ಕ್ಕೆ ಮುಂದೂಡಿದರು.
