ಬೆಂಗಳೂರು: ಕೊಲೆಯಾದ ರೇಣುಕಸ್ವಾಮಿಯವರ ಕುಟುಂಬಕ್ಕೆ ಧೈರ್ಯ ತುಂಬುವ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದರು.
ಚಿತ್ರದುರ್ಗದಲ್ಲಿ ಇಂದು ರೇಣುಕಸ್ವಾಮಿಯವರ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರೇಣುಕಸ್ವಾಮಿಯವರ ಧರ್ಮಪತ್ನಿ 4 ತಿಂಗಳ ಗರ್ಭಿಣಿ. ಮುಂದಿನ ದಿನಗಳಲ್ಲಿ ಆ ಹೆಣ್ಮಗಳಿಗೆ ಒಂದು ಸರಕಾರಿ ಉದ್ಯೋಗ ಕೊಡಬೇಕು. ಸರಕಾರವು ಪರಿಹಾರವನ್ನೂ ಕೊಡಬೇಕು ಎಂದು ಆಗ್ರಹಿಸಿದರು.
ರೇಣುಕಸ್ವಾಮಿಯವರ ಹತ್ಯೆ ಒಂದು ಅಮಾನವೀಯ ಕೃತ್ಯ. ನಾಗರಿಕ ಸಮಾಜದ ಯಾರೂ ಕೂಡ ಇದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.ಪ್ರತಿಯೊಬ್ಬರು ಈ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸಬೇಕು. ಈ ವಿಚಾರ ಕೇವಲ ರಾಜ್ಯದಲ್ಲಷ್ಟೇ ಅಲ್ಲ; ದೇಶದಲ್ಲೂ ಚರ್ಚೆ ಆಗುತ್ತಿದೆ. ತಂದೆ, ತಾಯಿ, ಅವರ ಧರ್ಮಪತ್ನಿಯನ್ನು ನೋಡಿದರೆ ನಿಜವಾಗಲೂ ಕೂಡ ದುಃಖ ಆಗುತ್ತದೆ ಎಂದು ನುಡಿದರು.
ಈ ಘಟನೆಯಲ್ಲಿ ದೊಡ್ಡ ವ್ಯಕ್ತಿಗಳಿರುವ ವಿಚಾರ ಜಗಜ್ಜಾಹೀರಾಗಿದೆ. ಆದರೆ, ತನಿಖೆ ಸರಿಯಾದ ರೀತಿಯಲ್ಲಿ ಆಗಬೇಕು. ತನಿಖೆ ಸಡಿಲ ಆಗಬಾರದು; ಯಾವುದೇ ಒತ್ತಡಕ್ಕೆ ಮಣಿಯದೆ, ತಪ್ಪಿತಸ್ಥರಿಗೆ, ಕೊಲೆಗಡುಕರಿಗೆ ಸರಿಯಾದ ಶಿಕ್ಷೆ ಆಗುವ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಮುಖ್ಯಮಂತ್ರಿಯವರು ತಕ್ಷಣ ಪರಿಹಾರ ನೀಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. ಗೃಹ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹೇಳಿದರು.
ಪಕ್ಷದಿಂದ ಇವತ್ತು 2 ಲಕ್ಷ ರೂ. ನೀಡಿದ್ದೇವೆ. ಸರಕಾರವು ಪರಿಹಾರದ ಜೊತೆಗೇ ಸರಕಾರಿ ಉದ್ಯೋಗವನ್ನೂ ಕೊಡುವ ಅವಶ್ಯಕತೆ ಇದೆ. ಈ ವಿಷಯವನ್ನು ಸರಕಾರವು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷ ಮುರುಳಿ, ಮುಖಂಡರಾದ ಎಸ್.ಲಿಂಗಮೂರ್ತಿ, ಹನುಮಂತೇಗೌಡ, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.