ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನ ದಿನಕ್ಕೂ ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಒಬ್ಬೊಬ್ಬರೇ ಪೊಲೀಸರ ಬಲೆಗೆ ಬೀಳುತ್ತಿದ್ದಾರೆ. ಮೊದಲು 13ಕ್ಕೆ ಇದ್ದ ಆರೋಪಿಗಳ ಸಂಖ್ಯೆ ಈಗ ಬರೋಬ್ಬರಿ 19ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಕರೆಂಟ್ ಶಾಕ್ ಕೊಟ್ಟಿದ್ದ ಆರೋಪಿ ಕೂಡ ಬಂಧಿತನಾಗಿದ್ದಾನೆ.
ಆದರೆ, ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ಕೊಟ್ಟಿದ್ದ ಆರೋಪಿಗೂ ನಟ ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ ಎನ್ನುವುದೇ ಇಲ್ಲಿ ದೊಡ್ಡ ಟ್ವಿಸ್ಟ್. ಹೌದು.. ದರ್ಶನ್ ಅಂಡ್ ಗ್ಯಾಂಗ್ ಮೇಲಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 9ನೇ ಆರೋಪಿ ರಾಜು ಅಲಿಯಾಸ್ ಧನರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತನಿಗೆ ಕರೆಂಟ್ ಶಾಕ್ ಕೊಟ್ಟ ಮಾಸ್ಟರ್ ಮೈಂಡ್ ಇವನದ್ದೆ ಎಂದು ಹೇಳಲಾಗಿದೆ. ಕೊಲೆ ಪ್ರಕರಣದಲ್ಲಿ ಈವರೆಗೆ 19 ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.
ದರ್ಶನ್‌ಗೂ ರಾಜುಗೂ ಇಲ್ಲ ಸಂಬಂಧ!
ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಎಂಥವರನ್ನು ಬೆಚ್ಚಿಬೀಳಿಸಿದೆ. ಮೃತ ವ್ಯಕ್ತಿ ಅನುಭವಿಸಿದ ನರಕಯಾತನೆ ಅದರಲ್ಲಿ ದಾಖಲಾಗಿದೆ. ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಲಾಗಿದೆ ಎಂಬುದು ತಿಳಿದುಬಂದಿದೆ. ಈ ವಿದ್ಯುತ್ ಶಾಕ್ ನೀಡುವುದರ ಹಿಂದೆ ಇದ್ದದ್ದು 9ನೇ ಆರೋಪಿ ರಾಜು ಅಲಿಯಾಸ್ ಧನರಾಜು.
ಬಂಧಿತ ಆರೋಪಿ ರಾಜುಗೂ, ನಟ ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ ಎಂಬ ವಿಷಯ ಬಹಿರಂಗವಾಗಿದೆ. ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲದಿದ್ದರೂ ತನ್ನ ಸ್ನೇಹಿತನ ಮಾತು ಕೇಳಿ ಪಟ್ಟಣಗೆರೆ ಶೆಡ್‌ಗೆ ಬಂದಿದ್ದ ರಾಜು!. ಪ್ರಕರಣದ ಐದನೇ ಆರೋಪಿ ನಂದೀಶ್ ಜೊತೆ ಬೆಂಗಳೂರಲ್ಲಿ ರಾಜು ಕೇಬಲ್ ಕೆಲಸ ಮಾಡುತ್ತಿದ್ದರು. ಕೇಬಲ್ ಕೆಲಸ ಮಾಡುತ್ತಿದ್ದ ಕಾರಣ ಎಲೆಕ್ಟ್ರಿಕಲ್ ಮೆಗ್ಗರ್ ಬಗ್ಗೆ ಇಬ್ಬರಿಗೂ ಗೊತ್ತಿತ್ತು.
ದರ್ಶನ್ ಅಭಿಮಾನಿಯಾಗಿದ್ದ ಆರೋಪಿ ನಂದೀಶ್, ರೇಣುಕಾಸ್ವಾಮಿಗೆ ಹಿಂಸೆ ಕೊಡುತ್ತಿದ್ದ ಶೆಡ್‌ಗೆ ಮಂಡ್ಯ ಮೂಲದ ರಾಜುನನ್ನು ಕರೆಸಿಕೊಂಡಿದ್ದಾನೆ. ಸ್ನೇಹಿತನ ಮಾತು ಕೇಳಿ ಎಲೆಕ್ಟ್ರಿಕ್ ಡಿವೈಸ್ ತಂದು ಸಹಾಯ ಮಾಡಿದ್ದಾನೆ. ಪ್ರಕರಣ ಬಯಲಾಗುತ್ತಿದ್ದಂತೆ ರಾಜು ತಲೆಮರಿಸಿಕೊಂಡಿದ್ದ. ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಚಿತ್ರದುರ್ಗದಿಂದ ಕರೆತಂದ ರೇಣುಕಾಸ್ವಾಮಿಗೆ ಪಟ್ಟಣಗೆರೆ ಶೆಡ್‌ನಲ್ಲಿ ನಂದೀಶ್ ಮತ್ತು ಇತರ ಆರೋಪಿಗಳು ಕರೆಂಟ್ ಶಾಕ್ ನೀಡುವ ಪ್ಲ್ಯಾನ್ ಮಾಡಿದ್ದರು. ಎಲೆಕ್ಟ್ರಿಕಲ್ ಮೆಗ್ಗರ್ ಮಷಿನ್ ಬಳಸಿ ಮೃತನಿಗೆ ಕರೆಂಟ್ ಶಾಕ್ ನೀಡಲಾಗಿದೆ. ಪ್ರಕರಣ ದೊಡ್ಡದಾಗುತ್ತಿದ್ದಂತೆ ರಾಜು ನಾಪತ್ತೆಯಾಗಿದ್ದ. ಆದರೆ, ರಾಜುವನ್ನು ಬೆಂಗಳೂರಿನ ಸ್ನೇಹಿತನ ಮನೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ತನಿಖೆ ಮಾಡುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ರಾಜು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎಲ್ಲ ವಿಷಯವನ್ನು ಆರೋಪಿ ಬಾಯಿ ಬಿಟ್ಟಿದ್ದಾನೆ. ಬಳಿಕ ಎಲೆಕ್ಟ್ರಿಕಲ್ ಮೆಗ್ಗರ್ ಯಂತ್ರ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ನೇಹಿತನ ಮಾತು ಕೇಳಿ ಅಪರಾಧ ಕೃತ್ಯಕ್ಕೆ ಸಾಥ್ ನೀಡಿದ್ದಕ್ಕೇ ಜೈಲಿನಲ್ಲಿ ಕೂರಬೇಕಾದ ಸ್ಥಿತಿಯಲ್ಲಿದ್ದಾನೆ ಆರೋಪಿ ರಾಜು.