ಬೆಂಗಳೂರು: ರೈತರಿಗೆ ಅವಮಾನವಾಗುವಂತಹ ಯಾವುದೇ ವಿವಾದಾತ್ಮಕ ಹೇಳಿಕೆಯನ್ನ ನೀಡಿಲ್ಲ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ರೈತ ವಿರೋಧಿಯಲ್ಲ. ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಅಕ್ಷೇಪ ವ್ಯಕ್ತಪಡಿಸಿದರು.
ಮೂರು ವರ್ಷಕ್ಕೊಮ್ಮೆ ರೈತರು ಬೆಳೆಯುವಂತಹ ಬೆಳೆಗಳಿಗೆ ಬೆಲೆ ಸಿಗುತ್ತದೆ. ಉಳಿದ ಎರಡು ವರ್ಷ ಅವರ ಬೆಳೆಗಳಿಗೆ ನಿರ್ದಿಷ್ಟ ಪ್ರಮಾಣದ ಬೆಲೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ತಮ್ಮ ಸಾಲಮನ್ನಾ ಆಗಲಿ ಎಂದು ಬಯಸುತ್ತಾರೆ ಎಂದು ಹೇಳಿದ್ದೆ ಅಷ್ಟೇ. ಆದರೆ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯನ್ನು ತಿರುಚಲಾಗಿದೆ ಎಂದು ಕಿಡಿಕಾರಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವಾನಂದ ಪಾಟೀಲ್ ಮಾತನಾಡಿ, ರೈತರಿಗೆ ಕೃಷ್ಣಾ ನದಿ ನೀರು, ವಿದ್ಯುತ್ ಉಚಿತವಾಗಿ ಸಿಗುತ್ತಿದೆ. ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜ, ಗೊಬ್ಬರ ಕೊಟ್ಟರು. ಇನ್ನೂ ಅವರಿಗೆ ಇರುವ ಆಸೆ ಏನೆಂದರೆ ಮೇಲೆ ಮೇಲೆ ಬರಗಾಲ ಬಂದರೆ ನಮ್ಮ ಸಾಲ ಮನ್ನಾ ಆಗುತ್ತೆ ಅನ್ನೋದು. ಯಾರು ಈ ರೀತಿ ಬಯಸಬಾರದು ಎಂದಿದ್ದರು.