ಚೆನ್ನೈ: ಎಲೆಕ್ಟ್ರಿಕ್ ರೈಲು ಡಿಕ್ಕಿಯಾಗಿ ಕರ್ನಾಟಕದ ಮೂವರು ವಿಶೇಷಚೇತನ ಬಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಮಧ್ಯಾಹ್ನ ನಡೆದಿದೆ. ಮೂವರು ಹುಬ್ಬಳ್ಳಿ ಮೂಲದವರಾಗಿದ್ದು, ಹಳಿಯಲ್ಲಿ ಆಟವಾಡುವ ವೇಳೆ ಮಕ್ಕಳಿಗೆ ರೈಲು ಬರುವುದರ ಅರಿವಿಲ್ಲದೇ ಈ ದುರ್ಘಟನೆ ನಡೆದಿದೆ.
ಹುಬ್ಬಳ್ಳಿಯಲ್ಲಿ ಅಜ್ಜ, ಅಜ್ಜಿಯೊಂದಿಗೆ ವಾಸವಾಗಿದ್ದ ಈ ಮಕ್ಕಳು ರಜೆ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ನೆಲೆಸಿರುವ ಪೋಷಕರ ಬಳಿಗೆ ತೆರಳುತ್ತಿದ್ದಾಗ ದುರಂತ ಜರುಗಿದೆ. ಮೃತರು ಮಂಜುನಾಥ್(11) ರವಿ(12) ಮತ್ತು ಸುರೇಶ್(14) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಹೋದರರು. ಈ ಪೈಕಿ ಇಬ್ಬರು ಕಿವುಡ ಮತ್ತು ಮೂಗರಾಗಿದ್ದರು. ರವಿ ಮತ್ತು ಸುರೇಶ್ ಅವರು ಜಂಬಯ್ಯ ಎನ್ನುವವರ ಪುತ್ರರಾಗಿದ್ದು ಇಬ್ಬರು ಸಹೋದರರು ಕಿವುಡ ಮತ್ತು ಮೂಗರಾಗಿದ್ದರು. ಮಂಜುನಾಥ ಎಂಬಾತ ಹನುಮಂತ ಅವರ ಪುತ್ರನಾಗಿದ್ದು ಮಾತುಬರುತ್ತಿರಲಿಲ್ಲ.
ಮಧ್ಯಾಹ್ನ ಮೂವರು ಕೂಡ ಉರಪಕ್ಕಂ ಸಮೀಪದ ರೈಲ್ವೆ ಹಳಿ ಪಕ್ಕದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಚೆನ್ನೈ ಬೀಜ್ ರೈಲ್ವೆ ನಿಲ್ದಾಣದಿಂದ ಚೆಂಗಲ್ಪಟ್ಟು ಕಡೆ ಸಂಚರಿಸುತ್ತಿದ್ದ ಎಲೆಕ್ಟ್ರಿಕ್ ರೈಲು ಗುದ್ದಿದೆ. ಮೃತದೇಹಗಳು ಛಿದ್ರವಾಗಿವೆ.ತಾಂಬರಂ ಠಾಣೆ ರೈಲ್ವೆ ಪೊಲೀಸರು, ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ಕೈಗೊಂಡಿದ್ದಾರೆ.