ಬೀದರ್: ಸಿಂಧುತ್ವ ಪ್ರಮಾಣ ಪತ್ರ ಮಾಡಿಸಿಕೊಡಲು ₹10 ಸಾವಿರ ಲಂಚ ಪಡೆದಿರುವುದು ಸಾಬೀತಾಗಿದ್ದರಿಂದ ಬಸವಕಲ್ಯಾಣ ತಾಲ್ಲೂಕಿನ ಇಲ್ಯಾಳ ಗ್ರಾಮದ ಗ್ರಾಮ ಲೆಕ್ಕಿಗ ಶೇಖರ ಬಿ. ಪವಾರ ಎಂಬಾತನಿಗೆ 4 ವರ್ಷ ಜೈಲು ಶಿಕ್ಷೆ, ಒಂದುವರೆ ಲಕ್ಷ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಎಂ. ಆನಂದ ಶೆಟ್ಟಿ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ. ಲಂಚ ನಿಷೇಧ ಕಾಯ್ದೆಯ ಕಲಂ 13(2)ರ ಅಡಿ ನಾಲ್ಕು ವರ್ಷ ಜೈಲು ಶಿಕ್ಷೆ, ₹1 ಲಕ್ಷ ದಂಡ, ದಂಡ ಭರಿಸಲು ಆಗದಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಜೈಲು, ಕಲಂ 7ರ ಅಡಿ ಮೂರು ವರ್ಷ ಜೈಲು ಶಿಕ್ಷೆ, ₹50 ಸಾವಿರ ದಂಡ, ದಂಡ ಭರಿಸಲು ತಪ್ಪಿದಲ್ಲಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ. 2013ನೇ ಸಾಲಿನಲ್ಲಿ ಕೆಎಸ್ಆರ್ಪಿ ಕಾನ್ಸ್ಟೆಬಲ್ ಹುದ್ದೆ ನೇಮಕಾತಿಗೆ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ವಿಶ್ವನಾಥ ಮಾರುತಿ ಅರ್ಜಿ ಸಲ್ಲಿಸಿದ್ದರು. ಸಿಂಧುತ್ವ ಪರಿಶೀಲನೆ ವರದಿ ತಯಾರಿಸಿ ಮೇಲಧಿಕಾರಿಗಳಿಗೆ ಕಳಿಸಲು ಹಣ ನೀಡಬೇಕಾಗುತ್ತದೆ ಎಂದು ಸುಳ್ಳು ಹೇಳಿ ಗ್ರಾಮ ಲೆಕ್ಕಿಗ ಶೇಖರ ಬಿ. ಪವಾರ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ. 2014ರ ಫೆಬ್ರುವರಿ 6ರಂದು ಕಚೇರಿಯಲ್ಲಿ ₹8 ಸಾವಿರ ಲಂಚ ಸ್ವೀಕರಿಸಿದ್ದಾನೆ. ಹೊರಗೆ ಕೆಲವರು ಓಡಾಡುತ್ತಿರುವುದನ್ನು ಕಂಡು ಲಂಚದ ಹಣವನ್ನು ರಸ್ತೆಯ ಬದಿಯಲ್ಲಿ ಎಸೆದು ಓಡಿ ಹೋಗುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದ. ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್.ಎಸ್. ಜಹಾಗೀರದಾರ ತನಿಖೆ ನಡೆಸಿ, ದೋಷರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.