ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರೆ ಲಕ್ಷಾಂತರ ಭಕ್ತರ ನಡುವೆ ಮಠದ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು. ಮಹಾ ರಥೋತ್ಸವ ಅಂಗವಾಗಿ ಎಲ್ಲಿ ನೋಡಿದರೂ ಸಂಭ್ರಮ. ತಳಿರು ತೋರಣ, ಹೂವಿನ ಅಲಂಕಾರ ಮತ್ತು ವಿದ್ಯುತ್ ಬೆಳಕಿನ ಹೊಳಪಿನಲ್ಲಿ ಅಂದವಾಗಿ ಕಾಣುತ್ತಿರುವ ಗವಿಮಠದಲ್ಲಿ ಈಗ ಭರ್ತಿ ಜಾತ್ರೆಯ ಸಡಗರ. ಎಲ್ಲರಲ್ಲಿಯೂ ಅಜ್ಜನ ಜಾತ್ರೆಯದ್ದೇ ಖುಷಿ.
ಕಣ್ಣು ಹಾಯಿಸಿದಷ್ಟೂ ದೂರ ಜನವೋ ಜನ. ಮಠದ ಮುಂಭಾಗದ ವಿಶಾಲವಾದ ಆವರಣದಲ್ಲಿ ವಿರಾಜಮಾನವಾಗಿ ನಿಂತಿದ್ದ ರಥ ಧಾರ್ಮಿಕ ವಿಧಿವಿಧಾನಗಳ ನಂತರ ಮುಂದಕ್ಕೆ ತೆರಳುತ್ತಿದ್ದಂತೆ ಎಲ್ಲರಲ್ಲಿಯೂ ಸಂಭ್ರಮವೋ ಸಂಭ್ರಮ. ಈ ವೇಳೆ ಚಪ್ಪಾಳೆ ಹೊಡೆದು ಭಕ್ತರು ಸಂಭ್ರಮಿಸಿದರು.