ನವದೆಹಲಿ: 2024ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಲಖ್ಪತಿ ದೀದಿ ಯೋಜನೆ’ ಕುರಿತು ಪ್ರಸ್ತಾಪಿಸಿದ್ದಾರೆ. ಈ ಯೋಜನೆಯ ಮೂಲಕ 2025ರ ವೇಳೆಗೆ ಲಕ್ಷಾಂತರ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ನವೋದ್ಯಮಗಳಲ್ಲಿ ಅವಕಾಶ ಕಲ್ಪಿಸುವ ಮೂಲಕ, ಮಹಿಳೆಯರ ಘನತೆ ಮತ್ತು ಬದುಕಿನಲ್ಲಿ ಸುಧಾರಣೆಗಳನ್ನು ತರುವ ಮೂಲಕ ಕಳೆದ 10 ವರ್ಷಗಳಲ್ಲಿ ಸ್ತ್ರೀ ಸಬಲೀಕರಣಕ್ಕೆ ವೇಗ ದೊರೆತಿದೆ. ಇನ್ನು ಮೀನುಗಾರಿಕೆ ಯೋಜನೆಯನ್ನು ಉತ್ತೇಜಿಸಲು ಸರ್ಕಾರ ಕೆಲಸ ಮಾಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ದೇಶದಲ್ಲಿ ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಒತ್ತು ನೀಡಲಾಗುವುದು, ಅಂಗನವಾಡಿ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ 2 ಕೋಟಿ ಬಡವರಿಗೆ ಮನೆ ನಿರ್ಮಿಸಿಕೊಡುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.