ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯದಲ್ಲಿ ಭಾರಿ ಸುಧಾರಣೆ ಕಂಡುಬಂದಿದೆ. ಆರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಲಾಲೂ ಅವರು ಬ್ಯಾಂಡ್ಮಿಂಟನ್ ಆಡುತ್ತಿರುವ ವೀಡಿಯೋವನ್ನು ಅವರ ಪುತ್ರ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲಾಲೂ ಅವರು ನೆಟ್‍ನಲ್ಲಿ ಬಾಲ್‍ನ್ನು ಹೊಡೆದ ನಂತರ ನಗುತ್ತಿರುವ ದೃಶ್ಯಕ್ಕೆ ಹಳೆಯ ಹಿಂದಿ ಹಾಡನ್ನು ಸೇರಿಸಿ ತೇಜಸ್ವಿ ಹಾಕಿರುವ ವೀಡಿಯೋ ಇದೀಗ ಭಾರಿ ವೈರಲ್ ಆಗಿದೆ. ಅವರು ಯಾರಿಗೂ ಭಯಪಡುವುದಿಲ್ಲ, ಅವರು ಹೋರಾಡಿದ್ದಾರೆ, ಹೋರಾಡುತ್ತಾರೆ, ಜೈಲಿಗೆ ಹೋಗಲು ಹೆದರುವುದಿಲ್ಲ ಮತ್ತು ಅಂತಿಮವಾಗಿ ಗೆಲ್ಲುತ್ತಾರೆ, ಎಂದು ತೇಜಸ್ವಿ ಯಾದವ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ತಮ್ಮ ತಂದೆಯ ಸುದೀರ್ಘ ಕಾನೂನು ಹೋರಾಟ ಮತ್ತು ಅವರನ್ನು ಮೌನಗೊಳಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂಬ ಆರೋಪಗಳನ್ನು ಉಲ್ಲೇಖಿಸಿ ತೇಜಸ್ವಿ ಯಾದವ್ ಬರೆದಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರು ಸುಮಾರು ಏಳು ತಿಂಗಳ ಕಾಲ ಬಿಹಾರದಿಂದ ದೂರವಿದ್ದರು, ಈ ಸಮಯದಲ್ಲಿ ಅವರು ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡರು ಮತ್ತು ದೆಹಲಿಯಲ್ಲಿರುವ ಅವರ ಹಿರಿಯ ಮಗಳು ಮಿಸಾ ಭಾರತಿ ಅವರ ಮನೆಯಲ್ಲಿ ಚೇತರಿಸಿಕೊಂಡರು.
ಕಳೆದ ವರ್ಷ ಡಿಸೆಂಬರ್‍ನಲ್ಲಿ ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಶಸಚಿಕಿತ್ಸೆಗೆ ಒಳಗಾದ ಯಾದವ್ ಹಿರಿಯ ಈ ವರ್ಷದ -ಪೊಬ್ರವರಿಯಲ್ಲಿ ಭಾರತಕ್ಕೆ ಮರಳಿದರು. ಕಳೆದ ವರ್ಷ ಡಿಸೆಂಬರ್ 5 ರಂದು ಕಸಿ ಮಾಡಲಾಗಿತ್ತು. ಬಿಹಾರದ ಮಾಜಿ ಸಿಎಂ ಹಲವಾರು ಮೇವು ಹಗರಣ ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಪ್ರಸ್ತುತ ವೈದ್ಯಕೀಯ ಕಾರಣಗಳಿಗಾಗಿ ಜಾಮೀನಿನ ಮೇಲೆ ಹೊರಗಿದ್ದಾರೆ.