ಬೆಳಗಾವಿ: ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ, ಈಗಿರುವ ಮೀಸಲಾತಿ ಕೈತಪ್ಪುತ್ತದೆ ಎಂದು ಕೆಲವರು ಹೇಳುತ್ತಿರುವುದು ಶುದ್ಧಸುಳ್ಳು ಎಂದು ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೋರಾಟ ಆರಂಭವಾದ ದಿನದಿಂದಲೂ ತಮ್ಮ ಸ್ವಾರ್ಥ ಮತ್ತು ಅಸ್ತಿತ್ವಕ್ಕಾಗಿ ಕೆಲವರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕ್ರೈಸ್ತರು, ಮುಸ್ಲಿಮರು ಮತ್ತು ಜೈನರ ಹೆಸರಿದೆ. ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕ ನಂತರವೂ, ಈ ಸಮುದಾಯದವರು ಮೀಸಲಾತಿ ಪಡೆಯುತ್ತಿದ್ದಾರೆ. ಹೀಗಿರುವಾಗ ಲಿಂಗಾಯತ ಸ್ವತಂತ್ರ ಧರ್ಮವಾದ ನಂತರವೂ, ಅದೇ ಪಟ್ಟಿಗೆ ಅನುಗುಣವಾಗಿ ಮೀಸಲಾತಿ ಪಡೆಯಬಹುದು. ಆದರೆ, ಕೆಲವು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿಯುವಿಕೆ ಪರಿಗಣಿಸಿ, ಮೀಸಲಾತಿ ಕೊಡಲಾಗುತ್ತದೆ. ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಮೀಸಲಾತಿ ಕೈತಪ್ಪದು. ನಮ್ಮ ಹೋರಾಟ ಮುಂದುವರಿಯುವುದು ಎಂದು ಸ್ಪಷ್ಟಪಡಿಸಿದರು.