ನವದೆಹಲಿ: ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ಮತದಾನ ಮಾಡಲಿದ್ದಾರೆ.
ಐದನೇ ಹಂತದಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯಲಿದೆ. ಲೋಕಸಭಾ ಚುನಾವಣೆ ಜತೆಯಲ್ಲೇ ಒಡಿಶಾದ 35 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದ್ದು, ಬಿಜೆಡಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕಣದಲ್ಲಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ರಾಯ್ಬರೇಲಿ), ಬಿಜೆಪಿಯ ಸ್ಮೃತಿ ಇರಾನಿ (ಅಮೇಠಿ), ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ (ಲಖನೌ) ಮತ್ತು ಪೀಯೂಷ್ ಗೋಯಲ್ (ಮುಂಬೈ ಉತ್ತರ), ಒಮರ್ ಅಬ್ದುಲ್ಲಾ (ಬಾರಾಮುಲ್ಲಾ) ಹಾಗೂ ಆರ್ಜೆಡಿಯ ರೋಹಿಣಿ ಆಚಾರ್ಯ (ಸಾರಣ್) ಅವರು ಕಣದಲ್ಲಿರುವ ಪ್ರಮುಖರು.