ಚಿತ್ರದುರ್ಗ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿನ ಬಂದೂಕು ಪರವಾನಗಿ ಪಡೆದಿರುವ ನಾಗರೀಕರ ಬಳಿಯಲ್ಲಿರುವ ಗನ್, ಪಿಸ್ತೂಲ್ ಹಾಗೂ ಎಲ್ಲಾ ವಿಧವಾದ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸಾರ್ವಜನಿಕ ಹಿತದೃಷ್ಠಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಬಂದೂಕು ಪರವಾನಗಿ ಪಡೆದಿರುವ ನಾಗರೀಕರು ತಮ್ಮ ಬಳಿ ಇರುವ ಎಸ್‍ಬಿಎಂಎಲ್, ಎಸ್‍ಬಿಬಿಎಲ್, ಡಿಬಿಬಿಎಲ್, ಡಿಬಿಎಂಎಲ್, ರಿವಾಲ್ವಾರ್ ಹಾಗೂ ಪಿಸ್ತೂಲ್ ಎಲ್ಲಾ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಆಮ್ರ್ಸ್ ಕಾಯ್ದೆ-1959ರ ಕಲಂ 24ಎ ಮತ್ತು 24ಬಿ ರಡಿಯಲ್ಲಿರುವಂತೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿರುವ ಅಧಿಕಾರಿಗಳ ವಶಕ್ಕೆ ಕೂಡಲೇ ಒಪ್ಪಿಸಬೇಕು. ಶಸ್ತ್ರಾಸ್ತ್ರಗಳನ್ನು ತಂದಿರಿಸಿದ ಪರವಾನಗಿದಾರರಿಗೆ ಸೂಕ್ತ ರಶೀದಿಯನ್ನು ನೀಡಲು ಆದೇಶಿಸಿದೆ.
ವಿನಾಯಿತಿಗೆ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ಸ್ಕ್ರೀನಿಂಗ್ ಕಮಿಟಿಯಲ್ಲಿ ಪರಿಶೀಲಿಸಿ, ನಿಯಮಾನುಸಾರ ವಿನಾಯಿತಿ ನೀಡಲು ಕ್ರಮವಹಿಸಲಾಗುವುದು. ಈ ಆದೇಶವು ನೀತಿ ಸಂಹಿತೆ ಮುಕ್ತಾಯವಾಗುವವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.