ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.3.75ರಷ್ಟು ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ.
ಕೇಂದ್ರ ವೇತನ ನೀತಿಯಂತೆ ವೇತನ ಪಡೆಯುವ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.4ರಷ್ಟು ಏರಿಸಿದೆ. ಸದ್ಯ ರಾಜ್ಯ ಸರ್ಕಾರಿ ನೌಕರರಿಗೆ ಶೇ.38.75ರಷ್ಟು ತುಟ್ಟಿ ಭತ್ಯೆ ಇತ್ತು. ಅದನ್ನು ಈಗ ಶೇಕಡಾ 42.5ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅದರಂತೆ ಕೇಂದ್ರ ವೇತನ ನೀತಿಯಂತೆ ವೇತನ ಪಡೆಯುವವರ ತುಟ್ಟಿ ಭತ್ಯೆಯನ್ನು ಶೇ.46ರಿಂದ ಶೇ.50ಕ್ಕೆ ಏರಿಸುವುದಾಗಿ ಸರ್ಕಾರ ತಿಳಿಸಿದೆ. ಜನವರಿ 1 ರಿಂದಲೇ ತುಟ್ಟಿ ಭತ್ಯೆ ಹೆಚ್ಚಳ ಪೂರ್ವಾನ್ವಯ ಆಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 1792.71 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಹೇಳಲಾಗಿದೆ.