‘ಲೋಕಸಭಾ ಸಮರ ದೊಡ್ಡ ಸತ್ವಪರೀಕ್ಷೆ’- ಯಡಿಯೂರಪ್ಪ

ಬೆಂಗಳೂರು: ಲೋಕಸಭಾ ಸಮರವು ನಮ್ಮೆಲ್ಲರಿಗೆ ಬಹುದೊಡ್ಡ ತಿರುವಿನ ಸತ್ವ ಪರೀಕ್ಷೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಅರಮನೆ ಮೈದಾನದಲ್ಲಿ ಇಂದು ಆರಂಭವಾದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿ, 2019ರಲ್ಲಿ 26 ಸ್ಥಾನಗಳನ್ನು ಗೆಲ್ಲಲಾಗಿತ್ತು. ಇದು ಜನರ ಸಂಕಲ್ಪ ಶಕ್ತಿಯಾಗಿತ್ತು. ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿಯವರಿಗೆ ನಮ್ಮದೇ ಆದ ಕೊಡುಗೆ ನೀಡಬೇಕಿದೆ ಎಂದು ಮನವಿ ಮಾಡಿದರು.

ಜನರಿಗೆ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಕಲಹದಲ್ಲಿ ತೊಡಗಿದೆ. ಇವರ ಕಚ್ಚಾಟದಿಂದ ಅಧಿಕಾರ ಕುಸಿದುಬಿದ್ದಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದರು.
ಇದರ ನಡುವೆಯೂ ಅವರು ದುರ್ಮಾರ್ಗದಲ್ಲಿ ಮತ ಗಳಿಸುವ ಕುತಂತ್ರ ನಡೆಸಿದ್ದಾರೆ. ಜನರಿಗೆ ವಾಸ್ತವ ಮನವರಿಕೆ ಮಾಡಿಕೊಡುವ ಸವಾಲು ನಮ್ಮ ಮುಂದಿದೆ ಎಂದು ತಿಳಿಸಿದರು.

Advertisement

ಜನರು ಈ ಸರಕಾರದ ಬಗ್ಗೆ ಬೇಸತ್ತು ಹಿಡಿಶಾಪ ಹಾಕುತ್ತಿದ್ದಾರೆ. ಈ ಸರಕಾರಕ್ಕೆ ಬರಗಾಲದಲ್ಲಿ ರೈತರ ಕಣ್ಣೀರು ಒರೆಸಲು ಆಗಿಲ್ಲ. ಹೆಣ್ಮಕ್ಕಳ ಮಾನ ರಕ್ಷಿಸಲು ಸಾಧ್ಯವಾಗಿಲ್ಲ. ಅರಾಜಕತೆ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಇದೆಲ್ಲವನ್ನು ನೋಡುತ್ತ ಸುಮ್ಮನಿರಲು ಅಸಾಧ್ಯ. ಜನರ ಪರವಾಗಿ, ರಾಜ್ಯದ ಪರವಾಗಿ ನಿಂತು ಹೋರಾಟ ಮಾಡೋಣ ಎಂದು ತಿಳಿಸಿದರು.

ಬಿಜೆಪಿಗೆ ಜಗದೀಶ ಶೆಟ್ಟರ್ ಸೇರಿದ್ದು, ನಮಗೊಂದು ದೊಡ್ಡ ಶಕ್ತಿಯನ್ನು ಕೊಟ್ಟಿದೆ. ಅವರಿಗೆ ವಿಶೇಷ ಸ್ವಾಗತ ಎಂದರು. ನೂತನ ರಾಜ್ಯ, ಜಿಲ್ಲಾ ಪದಾಧಿಕಾರಿಗಳನ್ನು ಅವರು ಅಭಿನಂದಿಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement