ಬೆಂಗಳೂರು : ಈ ಸಲದ ಲೋಕಸಭೆ ಚುನಾವಣೆಯ ಮೇಲೆ ಕಾಂಗ್ರೆಸ್ ಬಹಳ ನಿರೀಕ್ಷೆಗಳನ್ನಿಟ್ಟುಕೊಂಡಿದೆ. ಒಂದು ಫಲಿತಾಂಶ ಕಾಂಗ್ರೆಸ್ ನಲ್ಲಿ ಹತ್ತಾರು ಬದಲಾವಣೆಗೆ ಮುನ್ನುಡಿ ಬರೆಯಲಿದೆ ಅನ್ನೋದು ಖಚಿತ. ಈ ಮಾತಿಗೆ ನಿನ್ನೆ ಸಂಸದ ಡಿ.ಕೆ.ಸುರೇಶ್ ಅವರ ಸದಾಶಿವನಗರದ ಮನೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಏರ್ಪಡಿಸಿದ್ದ ಭೋಜನ ಕೂಟವೇ ಈ ಸಾಧ್ಯತೆಗಳ ಕುರಿತು ಶರಾ ಬರೆದಂತಿತ್ತು! ಕಾಂಗ್ರೆಸ್ ಪಕ್ಷದ ಇತ್ತೀಚಿನ ಆಂತರಿಕ ಸರ್ವೆಯೊಂದರ ಪ್ರಕಾರ, ರಾಜ್ಯದ ಇಪ್ಪತ್ತೆಂಟು ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಗೆ ಹದಿನಾರು ಸೀಟ್ ದಕ್ಕುತ್ತೆ ಅಂತಾ ಹೇಳಲಾಗುತ್ತೆ.
ಒಂದು ವೇಳೆ ಇದು ಹುಸಿಯಾದರೆ ಮತ್ತು ಫಲಿತಾಂಶ ಎರಡಂಕಿ ದಾಟದಿದ್ದರೆ ಅದಕ್ಕೆ ಆಯಾಯ ಸಚಿವರೇ ಹೊಣೆ ಹೊರಬೇಕಾಗಿದ್ದು, ತಮ್ಮ ಮಕ್ಕಳು, ಪತ್ನಿ ಅಥವಾ ಸಂಬಂಧಿಕರನ್ನೇ ಗೆಲ್ಲಿಸಿಕೊಂಡು ಬರಲಾಗದ ನೀವು ಇನ್ನು ಮುಂದೆ ಸಚಿವ ಸ್ಥಾನದಲ್ಲಿ ಮುಂದುವರಿಯೋಕೆ ಅವಕಾಶವಿಲ್ಲವೆಂದು ಅಂಥ ಸಚಿವರ ರಾಜೀನಾಮೆ ಪಡೆಯಲಾಗುತ್ತೆ ಅನ್ನೋ ಮಾತು ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ನಿನ್ನೆ ನಡೆದ ಭೋಜನ ಕೂಟದಲ್ಲಿ ಮುಖ್ಯವಾಗಿ ಚರ್ಚೆ ಬಂದಿದೆ ಎನ್ನಲಾಗುತ್ತೆ. ಇದರಿಂದಾಗಿ ಕೆಲ ಸಚಿವರ ನೆತ್ತಿಯ ಮೇಲೆ ತೂಗುಗತ್ತಿ ನೇತಾಡುವಂತೆ ಭಾಸವಾಗುತ್ತಿದೆ. ಹಾಗಾದರೆ, ಯಾರಿಗೆಲ್ಲ ಸಂಕಷ್ಟ ಎದುರಾಗಬಹುದು? ಅಂತಾ ನೋಡೋದಾರೆ, ಬೀದರ್ ನಲ್ಲಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಿ ಕಣಕ್ಕಿಳಿಸಿದ ಸಚಿವ ಈಶ್ವರ್ ಖಂಡ್ರೆ, ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರಿಗೆ ಟಿಕೆಟ್ ಕೈ ತಪ್ಪುವಂತೆ ಮಾಡಿ ಇತ್ತ ತಮ್ಮ ಮಗಳಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸಚಿವ ಶಿವಾನಂದ ಪಾಟೀಲ್, ಬೆಳಗಾವಿಯಲ್ಲಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಿ ಜಗದೀಶ್ ಶೆಟ್ಟರ್ ವಿರುದ್ಧ ತೊಡೆ ತಟ್ಟಿದ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚಿಕ್ಕೋಡಿಯಲ್ಲಿ ಇದೇ ಮೊದಲ ಬಾರಿಗೆ ತಮ್ಮ ಮಗಳಿಗೆ ಟಿಕೆಟ್ ಕೊಡಿಸಿ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದ ಸಚಿವ ಸತೀಶ್ ಜಾರಕಿಹೊಳಿ, ಇತ್ತ, ಚಾಮರಾಜನಗರದಲ್ಲಿ ಮಗನನ್ನು ಕಣಕ್ಕಿಳಿಸಿದ ಸಿಎಂ ಆಪ್ತ ಸಚಿವರಲ್ಲೊಬ್ಬರಾದ ಹೆಚ್.ಸಿ.ಮಹಾದೇವಪ್ಪ ಹೀಗೆ ತಲೆದಂಡಕ್ಕೆ ಅರ್ಹರಾದ ಸಚಿವರ ಪಟ್ಟಿ ಬೆಳೆಯುತ್ತ ಸಾಗುತ್ತೆ. ಆದರೆ, ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಹೋದರಿ ಗೀತಾ ಶಿವಕುಮಾರ್ ಅವರು ಸೋತರೆ ಸಚಿವ ಮಧು ಬಂಗಾರಪ್ಪನವರ ತಲೆದಂಡವಿಲ್ಲ ಎಂದೇ ಹೇಳಲಾಗುತ್ತೆ. ಇನ್ನು, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಡಾ.ಉಮೇಶ್ ಜಾಧವ್ ವಿರುದ್ಧ ಸೋತರೆ ಪ್ರಿಯಾಂಕ್ ಖರ್ಗೆಯವರ ಸಚಿವ ಸ್ಥಾನಕ್ಕೆ ಯಾವ ಚ್ಯುತಿಯೂ ಇಲ್ಲವೆಂದೇ ಹೇಳಲಾಗುತ್ತೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಆದರೆ, ಈಗಾಗಲೇ ಹೇಳಲಾದ ಸಚಿವರ ತಲೆದಂಡ ಮಾತ್ರ ಯಾಕೆ? ಅನ್ನೋ ಪ್ರಶ್ನೆಗೆ ಉತ್ತರ ಕಾಂಗ್ರೆಸ್ ಹೈಕಮಾಂಡ್ ನತ್ತ ಬೆರಳು ತೋರಿಸಲಾಗುತ್ತೆ. ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಅಭ್ಯರ್ಥಿಗಳ ಕೊರತೆ ಕಾಡಿತ್ತು. ಆಗ ಹೈಕಮಾಂಡ್, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿರೋ ಆಯ್ದ ಮಂತ್ರಿಗಳನ್ನೇ ಕಣಕ್ಕಿಳಿಸಲು ಸೂಚನೆ ನೀಡಿದಾಗ ಶಾಕ್ ಗೊಳಗಾಗಿದ್ದ ಸಚಿವರು ‘ಬೀಸೋ ದೊಣ್ಣೆ’ಯಿಂದ ತಪ್ಪಿಸಿಕೊಳ್ಳಲೆಂದು ತಮ್ಮ ಮಕ್ಕಳನ್ನು ಚುನಾವಣಾ ಕಣಕ್ಕಿಳಿಸುವ ಉಪಾಯ ಮಾಡಿದ್ದರು! ಇದಕ್ಕೊಪ್ಪಿದ “ಕೈ” ವರಿಷ್ಠ ಮಂಡಳಿ ಆಗ ಒಂದು ಕಂಡೀಶನ್ ಹಾಕಿತ್ತು. ಅದೇನಂದರೆ, ಒಂದು ವೇಳೆ ಚುನಾವಣೆಯಲ್ಲಿ ಮಕ್ಕಳಿಗೆ ಸೋಲುಂಟಾದರೆ ಅದಕ್ಕೆ ಸಚಿವ ಸ್ಥಾನದಲ್ಲಿರುವ ಅವರವರ ತಂದೆ-ತಾಯಿಗಳೇ ಹೊಣೆ ಹೊರಬೇಕಾಗುತ್ತೆ. ಜೊತೆಗೆ ತಮ್ಮ ಮಂತ್ರಿಗಿರಿಯನ್ನು ಕಳೆದುಕೊಳ್ಳಬೇಕಾಗುತ್ತೆ ಎಂದು. ಕಾಂಗ್ರೆಸ್ ಹೈಕಮಾಂಡ್ ನ ಈ ಕಂಡೀಷನ್ನೇ ಇದೀಗ ಕೆಲ ಸಚಿವರಿಗೆ ಮುಳುವಾಗಲಿದೆ ಅನ್ನೋದರಲ್ಲಿ ಸಂಶಯವೇ ಇಲ್ಲ. ಈ ಮಾತಿಗೆ ಪುಷ್ಟಿ ಎಂಬಂತೆ ನಿನ್ನೆ ರಾತ್ರಿ ಡಿಕೆಶಿ ಸಹೋದರರ ನಿವಾಸದಲ್ಲಿ ನಡೆದ ಭೋಜನ ಕೂಟದಲ್ಲಿ ನಡೆದ ಚರ್ಚೆಯೇ ಸಾಕ್ಷ್ಯ ಎಂಬಂತಾಗಿದೆ. ಒಂದು ವೇಳೆ, ಕಾಂಗ್ರೆಸ್ ಪಕ್ಷವು ನಿರೀಕ್ಷೆಯಂತೆ 16-18 ಸ್ಥಾನಗಳನ್ನು ಗೆದ್ದುಕೊಂಡರೆ ಇವರೆಲ್ಲರ ಮಂತ್ರಿ ಭಾಗ್ಯಕ್ಕೆ ಯಾವ ಕುತ್ತು ಇಲ್ಲ ಎನ್ನಲಾಗುತ್ತೆ. ಆದರೆ, ನಿರೀಕ್ಷಿತ ಫಲಿತಾಂಶ ತಲೆ ಕೆಳಗಾದರೆ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಹೊಣೆ ಹೊತ್ತು ತಲೆದಂಡಕ್ಕೆ ಸಿದ್ಧರಾಗಬೇಕಾಗುತ್ತೆ. ಇಂಥ ಸನ್ನಿವೇಶ ನಿರ್ಮಾಣವಾದರೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಕುಳಿತಿರುವ ಹೊಸಬರು ಹಳಬರು ಸೇರಿದಂತೆ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದ್ದು, ಹೈಕಮಾಂಡ್ ಸಿದ್ದರಾಮಯ್ಯನವರ ನೇತೃತ್ವದ ಸಂಪುಟದಲ್ಲಿರುವ ಮಂತ್ರಿಗಳ ಪೈಕಿ ಯಾರಿಗೆ ಕೋಕ್ ನೀಡಲಾಗುತ್ತೆ? ಇನ್ನಾರಿಗೆ ಮಣೆ ಹಾಕಲಾಗುತ್ತೆ? ಅನ್ನೋದು ಕುತೂಹಲ ಮೂಡಿಸಿದೆ. ಯಾವುದಕ್ಕೂ ಜೂನ್ 3ರ ಫಲಿತಾಂಶದವರೆಗೂ ಕಾಯಲೇಬೇಕಾಗಿದೆ. ಅದಾದ ಬಳಿಕ ಕಾಂಗ್ರೆಸ್ ನಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತೆ.