ನವದೆಹಲಿ: ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗಿದೆ. ಅನೇಕ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ ಗೆಲುವು ಆಗುತ್ತದೆ ಎಂದು ಹೇಳಿವೆ. ಇದೀಗ ಲೋಕನೀತಿ-ಸಿಎಸ್ಡಿಎಸ್ ಕೂಡ 19 ರಾಜ್ಯಗಳಲ್ಲಿ ಸುಮಾರು 10 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಿದೆ. ಇದೀಗ ಸಮೀಕ್ಷಾ ವರದಿ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಕ್ಕಿಂತ ಶೇಕಡಾ 12ರಷ್ಟು ಹೆಚ್ಚು ಮತ ಪಡೆಯುವ ಬಗ್ಗೆ ಸುಳಿವು ನೀಡಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಶೇ 46 ಮತ ಹಂಚಿಕೆ ಪಡೆದರೆ, ಇಂಡಿಯಾ ಶೇ 34ರ ಮತ ಹಂಚಿಕೆ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು ದಕ್ಷಿಣ -ಪೂರ್ವ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಈ ಬಾರಿ ಬಿಜೆಪಿ ಮೋಡಿ ಮಾಡಲಿದೆ ಎಂಬುದು ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವಾಗಲಿದೆ? ಚುನಾವಣೆಯಲ್ಲಿ ಚರ್ಚೆಯಾಗುವ ಮುಖ್ಯ ವಿಷಯಗಳು ಯಾವುವು ಎಂಬ ಬಗ್ಗೆ ಸಮೀಕ್ಷಾ ವರದಿ ಉಲ್ಲೇಖಿಸಿದೆ. ಸಮೀಕ್ಷೆಗೆ ಒಳಗಾದ ಹತ್ತರಲ್ಲಿ ನಾಲ್ಕು ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಕೂಡ ಸ್ವಲ್ಪ ಲಾಭವನ್ನು ಗಳಿಸುವ ನಿರೀಕ್ಷೆಯಿದೆ. ಆದರೆ, ಮತ ಹಂಚಿಕೆ ಪ್ರಮಾಣ ಗಮನಾರ್ಹ ಹೆಚ್ಚಳ ಕಂಡುಬಂದಿಲ್ಲ ಎಂದು ಸಮೀಕ್ಷಾ ವರದಿ ತಿಳಿಸಿದೆ. ಪೂರ್ವ, ದಕ್ಷಿಣ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಮತ ಹಂಚಿಕೆಯಲ್ಲಿ ಭಾರೀ ಜಿಗಿತ ಕಂಡುಬಂದಿದೆ ಎಂದೂ ಸಮೀಕ್ಷಾ ವರದಿ ಉಲ್ಲೇಖಿಸಿದೆ. ಇದರ ಪ್ರಕಾರ, ದಕ್ಷಿಣ ಭಾರತದಲ್ಲಿ 2019ರಲ್ಲಿ ಶೇ 18ರಷ್ಟಿದ್ದ ಬಿಜೆಪಿ ಮತ ಹಂಚಿಕೆ ಈ ಬಾರಿ ಶೇ 25ಕ್ಕೆ ಹೆಚ್ಚಳವಾಗಲಿದೆ. ಪೂರ್ವ ಭಾರತ ಮತ್ತು ಈಶಾನ್ಯದಲ್ಲಿ 2019ರಲ್ಲಿ ಶೇ 34ರಷ್ಟಿದ್ದ ಮತ ಹಂಚಿಕೆ ಈ ಬಾರಿ ಶೇ 42ಕ್ಕೆ ಹೆಚ್ಚಳವಾಗಲಿದೆ. ಸಮೀಕ್ಷೆಯ ಮುಖ್ಯಾಂಶಗಳು * 2019ಕ್ಕೆ ಹೋಲಿಸಿದರೆ ಸರ್ಕಾರದ ಕಾರ್ಯಕ್ಷಮತೆಯ ಕುರಿತಾದ ಮೆಚ್ಚುಗೆ ಪ್ರಮಾಣದಲ್ಲಿ ಕುಸಿತವಿದೆ. ನಗರ ಪ್ರದೇಶಗಳ ಜನರು ಮತ್ತೊಂದು ಅವಧಿಗೆ ಕಡಿಮೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. * ಪ್ರಧಾನಿ ನರೇಂದ್ರ ಮೋದಿಯವರ ‘ಮೋದಿ ಗ್ಯಾರಂಟಿ’ ಮತದಾರರನ್ನು ಸೆಳೆಯುತ್ತಿದೆ, ಇದು ರಾಹುಲ್ ಗಾಂಧಿಯವರ ಭರವಸೆಗಳಿಗಿಂತ ಹೆಚ್ಚಿನ ಲಾಭವನ್ನು ಬಿಜೆಪಿಗೆ ನೀಡುತ್ತಿದೆ. * ಪ್ರಧಾನಿ ಮೋದಿ ವ್ಯಕ್ತಿತ್ವವು ನಿರ್ಣಾಯಕ ಅಂಶವಾಗಿ ಪರಿಣಮಿಸಿದೆ. ಪ್ರತಿಕ್ರಿಯಿಸಿದವರಲ್ಲಿ ಅರ್ಧದಷ್ಟು ಜನ ರಾಹುಲ್ ಗಾಂಧಿಗಿಂತ ಪ್ರಧಾನಿಯಾಗಿ ಮೋದಿಗೇ ಆದ್ಯತೆ ನೀಡಿದ್ದಾರೆ. * ಆರ್ಥಿಕ ಸಂಕಷ್ಟದ ಹೊರತಾಗಿಯೂ, ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. * ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಮೋದಿ ಕುರಿತಾದ ಅತ್ಯಂತ ಮೆಚ್ಚುಗೆಯ ಕೆಲಸಗಳಲ್ಲಿ ಒಂದಾಗಿ ಕಾಣುತ್ತದೆ. ಇದು ಮತದಾರರಲ್ಲಿ, ವಿಶೇಷವಾಗಿ ಎನ್ಡಿಎ ಬೆಂಬಲಿಗರಲ್ಲಿ ಬಲವಾಗಿ ಪ್ರತಿಧ್ವನಿಸುತ್ತಿದೆ. * ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಮತದಾರರಲ್ಲಿ ಕಳವಳವಿದೆ. ಮೋದಿ ಮತ್ತು ಬಿಜೆಪಿಯ ನಿರಂತರ ಜನಪ್ರಿಯತೆಯ ಬಗ್ಗೆ ಇದು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.