ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಆಲೋಚಿಸುತ್ತಿದೆ. ಇದಕ್ಕಾಗಿ ಚುನಾವಣೆಗೆ ಸ್ಪರ್ಧಿಸುವ ಪ್ರಸ್ತಾಪದೊಂದಿಗೆ ಪಕ್ಷವು ಶಮಿ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದೆ.
ಇಂಡಿಯಾ ಟುಡೇ ವರದಿ ಪ್ರಕಾರ, ” ಬಿಜೆಪಿ ನಾಯಕತ್ವವು ಈಗಾಗಲೇ ಶಮಿ ಅವರನ್ನು ಚುನಾವಣೆ ಸ್ಪರ್ಧೆ ಬಗ್ಗೆ ಸಂಪರ್ಕಿಸಿದೆ. ಆದರೆ ಶಮಿ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಶಮಿ ಅವರನ್ನು ಅಭ್ಯರ್ಥಿಯಾಗಿ ಪ್ರಸ್ತಾಪಿಸಲಾಗಿದೆ. ಸಕಾರಾತ್ಮಕ ಚರ್ಚೆಗಳು ನಡೆದಿದೆ. ಬಿಜೆಪಿಯೊಳಗಿನ ಆಂತರಿಕ ಚರ್ಚೆಗಳ ಪ್ರಕಾರ, ಶಮಿಯನ್ನು ಕಣಕ್ಕಿಳಿಸುವುದು ಬಂಗಾಳದ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುವು ಸಾಧಿಸಲು ಸಹಾಯ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಆದರೆ ಶಮಿ ತಮ್ಮ ನಿರ್ಧಾರವನ್ನು ಸದ್ಯಕ್ಕೆ ಖಚಿತಪಡಿಸಿಲ್ಲ.ಉತ್ತರ ಪ್ರದೇಶ ಮೂಲದವರಾದ ಮೊಹಮ್ಮದ್ ಶಮಿ ಅವರು ಬಂಗಾಳದ ತಂಡದ ಪರ ರಣಜಿ ಟ್ರೋಫಿ ಪಂದ್ಯಗಳನ್ನಾಡಿದ್ದಾರೆ. ಈಗಲೂ ದೇಶಿಯ ಕ್ರಿಕೆಟ್ ನಲ್ಲಿ ಬಂಗಾಳವನ್ನೇ ಶಮಿ ಪ್ರತಿನಿಧಿಸುತ್ತಿದ್ದಾರೆ.