ಟೋಕಿಯೊ: ಲ್ಯಾಂಡಿಗ್ ವೇಳೆ ರನ್ ವೇಯಲ್ಲಿ ಚಲಿಸುತ್ತಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು, 300 ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಟೋಕಿಯೊದ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಐವರು ಸಿಬ್ಬಂದಿಗಳು ಮೃತಪಟ್ಟಿರುವುದಾಗಿ ಬೆಳಕಿಗೆ ಬಂದಿದೆ.
ಜಪಾನ್ ಏರ್‌ಲೈನ್ಸ್ ಗೆ ಸೇರಿದ JAL 516 ಎಂಬ ವಿಮಾನವೊಂದಕ್ಕೆ ರನ್ ವೇಯಲ್ಲಿ ಚಲಿಸುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದೆ. ವಿಮಾನದಲ್ಲಿದ್ದ ಆರು ಸಿಬ್ಬಂದಿಯಲ್ಲಿ ಐವರು ಮೃತಪಟ್ಟಿದ್ದಾರೆ. ಈ ಸಂದರ್ಭ ಸುಮಾರು 367 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
JAL 516 ವಿಮಾನವು ಲ್ಯಾಂಡ್ ಆಗುತ್ತಿದ್ದಂತೆ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂಬ ಸಂಶಯ ವ್ಯಕ್ತವಾಗಿದೆ. ಆದರೆ ವಿಡಿಯೋದಲ್ಲಿ ಸ್ಪಷ್ಟ ಚಿತ್ರಣ ಕಾಣದಿರುವುದರಿಂದ ಘಟನೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದುಬರಬೇಕಿದೆ. ಇನ್ನು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಮಾನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ಅಗ್ನಿ ಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ ವಿಮಾನದಲ್ಲಿದ್ದ 300 ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದಾರೆ. ಹಾಗೂ ಘಟನೆಯಿಂದ ವಿಮಾನ ಭಾಗಶಃ ಸುಟ್ಟು ಹೋಗಿದ್ದು, ದಟ್ಟ ಹೊಗೆ ಆವರಿಸಿಕೊಂಡಿತ್ತು ಎಂದು ತಿಳಿದುಬಂದಿದೆ.