ಬೆಳಗಾವಿ: ವಕೀಲರ ಮೇಲೆ ಹಲ್ಲೆಗೆ ಮುಂದಾದ್ರೆ ಇನ್ಮುಂದೆ ಜೈಲೇ ಗತಿ. ಹೌದು ಕರ್ನಾಟಕದ ವಕೀಲ ಸಮುದಾಯದ ಬಹುದಿನಗಳ ಬೇಡಿಕೆಯಾದ ವಕೀಲರ ರಕ್ಷಣಾ ವಿಧೇಯಕ (Karnataka Advocates Protection Act Bill) ಕೊನೆಗೂ ಮಂಡನೆಯಾಗಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಧರಣಿ ಮಧ್ಯೆಯೇ ಕರ್ನಾಟಕ ವಕೀಲರ ವಿರುದ್ಧದ ಹಿಂಸಾಚಾರ ತಡೆ ವಿಧೇಯಕ-2023ವನ್ನು ಕಾನೂನು ಸಚಿವ ಎಚ್ಕೆ ಪಾಟೀಲ್ ಮಂಡನೆ ಮಾಡಿದ್ದಾರೆ.
ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಕರ್ನಾಟಕ ವಕೀಲರ ಸಂಘ ಮನವಿ ಮಾಡಿತ್ತು. ಅಲ್ಲದೇ ಈ ಸಂಬಂಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಆದ್ರೆ, ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ 10ನೇ ರಾಜ್ಯ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರಲಾಗುವುದಾಗಿ ಭರವಸೆ ನೀಡಿದ್ದು.ಅದರಂತೆ ಇದೀಗ ಸಿದ್ದರಾಮಯ್ಯ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಲು ಮುಂದಾಗಿದೆ.
ಸೋಮವಾರ ಕಾನೂನು ಸಚಿವ ಎಚ್ಕೆ ಪಾಟೀಲ್ ಅವರು ಚಳಿಗಾಲದ ಅಧಿವೇಶನದಲ್ಲಿ ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ಮಂಡನೆ ಮಾಡಿದ್ದು, ನಾಳೆ ಅಂದರೆ ಡಿಸೆಂಬರ್ 12) ಅಂಗೀಕಾರವಾಗಲಿದೆ ಎಂದು ತಿಳಿಸಿದರು. ಇದೇ ವೇಳೆ ಚಿಕ್ಕಮಗಳೂರು ವಕೀಲನ ಮೇಲಿನ ಹಲ್ಲೆ ಬಗ್ಗೆ ಪ್ರಸ್ತಾಪಿಸಿದರು. ಇನ್ನು ಕಲಬುರಗಿಯಲ್ಲಿ ವಕೀಲ ಈರಣ್ಣಗೌಡ ಹತ್ಯೆಗೆ ಬಗ್ಗೆಯೂ ಸಹ ಸದನದಲ್ಲಿ ಸಚಿವರು ಪ್ರಸ್ತಾಪಿಸಿದರು.
ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ ಜಾರಿಯಾದರೆ ಯಾವುದೇ ವ್ಯಕ್ತಿ ವಕೀಲರ ಮೇಲೆ ಹಲ್ಲೆ ನಡೆಸುವಂತಿಲ್ಲ. ಒಂದು ವೇಳೆ ಹಲ್ಲೆ ಮಾಡಿದರೆ ಅಂತವರಿಗೆ 6 ತಿಂಗಳಿಂದ 3 ವರ್ಷಗಳವರೆಗೆ ಜೈಲುಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿವರೆಗೆ ದಂಡಕ್ಕೆ ವಿಧಿಸುವ ವಿಧೇಯಕ ಇದಾಗಿದೆ. ಅಪರಾಧ ಸಂಬಂಧ ವಕೀಲರನ್ನು ಪೊಲೀಸರು ಬಂಧಿಸಿದ್ದಲ್ಲಿ ಲಾಯರ್ ಅಸೋಸಿಯೇಷನ್‌ಗೆ ಪೊಲೀಸರು ಮಾಹಿತಿ ನೀಡಬೇಕು ಎಂಬುದು ಇದರಲ್ಲಿದೆ.