ಬೆಂಗಳೂರು: ವಕ್ಫ್ ಬೋರ್ಡ್ ನೋಟಿಸ್ ವಿವಾದ ತಾರಕ್ಕಕ್ಕೆ ಏರಿದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ರೈತರಿಗೆ ನೀಡಲಾಗಿದ್ದ ನೋಟಿಸ್ ವಾಪಸ್ ಪಡೆಯುವ ವಿಚಾರವಾಗಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಮ್ಯುಟೇಷನ್ ಮಾಡಲು ಯಾವುದೇ ಕಚೇರಿ, ಪ್ರಾಧಿಕಾರದ ನಿರ್ದೇಶನಗಳನ್ನು ತಕ್ಷಣ ಹಿಂಪಡೆಯಬೇಕು. ಮ್ಯುಟೇಷನ್ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಬೇಕು. ಈ ಕುರಿತು ನೀಡಲಾದ ಎಲ್ಲಾ ನೋಟೀಸ್‌ಗಳನ್ನ ಹಿಂಪಡೆಯುವುದು, ಸದರಿ ಜಮೀನುಗಳಲ್ಲಿ ವ್ಯವಸಾಯ ಮಾಡುವ ರೈತರ ವಿರುದ್ಧ ಯಾವುದೇ ಕ್ರಮ ಜರುಗಿಸುವಂತಿಲ್ಲ ಎಂದು ಅಧಿಕೃತ ಅದೇಶ ಹೊರಡಿಸಿದೆ.
ಸಿಎಂ ಸಿದ್ದರಾಮಯ್ಯ ಆದೇಶದ ಬಳಿಕವೂ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ನೆನಪೋಲೆ ಹೊರಡಿಸುವ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಅಪರ ಕಾರ್ಯದರ್ಶಿ ಡಾ.ಬಿ.ಉದಯ್ ಕುಮಾರ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ. ಉಪಚುನಾವಣೆ ಹೊತ್ತಿನಲ್ಲಿ ರೈತರಿಗೆ ವಕ್ಫ್ ನೋಟಿಸ್ ನೀಡಿರುವ ವಿಚಾರ ಕೇವಲ ವಿಪಕ್ಷಗಳಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲೂ ಅಸಮಾಧಾನಕ್ಕೆ ಕಾರಣವಾಗಿತ್ತು.
ರೈತರು ಹೋರಾಟದ ಹಾದಿ ಹಿಡಿಯುವ ಮುನ್ನ ನೋಟಿಸ್‌ಗಳನ್ನ ನೀಡೋದನ್ನ ನಿಲ್ಲಿಸಿ ಎಂದೆಲ್ಲ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಮನವಿ ಮಾಡಿದ್ದರು. ಅದು ಅಲ್ಲದೆ ವಿಪಕ್ಷಗಳು ವಕ್ಫ್ ನೋಟಿಸ್ ವಿಚಾರವನ್ನ ದೊಡ್ಡ ಹೋರಾಟ ಮಾಡಲು ತಯಾರಿ ನಡೆಸುತ್ತಿದ್ದರು ಇದನ್ನೆಲ್ಲ ಮನಗೊಂಡು ರೈತರಿಗೆ ನೀಡಿದ್ದ ನೋಟಿಸ್ ವಾಪಸ್ ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.