ವಯನಾಡು: ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿ ಇಂದಿದೆ 4 ದಿನವಾಗಿದೆ. ಇದೀಗ ಇಂದು ಭೂಕುಸಿತ ಪೀಡಿತ ಪ್ರದೇಶದಲ್ಲಿ 40 ತಂಡಗಳು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
190 ಅಡಿ ಉದ್ದದ ಬೈಲಿ ಸೇತುವೆ (ತಾತ್ಕಾಲಿಕ ಉಕ್ಕಿನ ಸೇತುವೆ) ನಿರ್ಮಾಣ ಪೂರ್ಣಗೊಂಡಿದೆ. ಇಂದು ಮುಂಜಾನೆಯಿಂದ ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಹೀಗಾಗಿ ಭೂಕುಸಿತದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾದ ಚೂರಲ್‌ಮಲ ಮತ್ತು ಮುಂಡಕ್ಕೈ ಪ್ರದೇಶಗಳಿಗೆ ಅಗೆಯುವ ಯಂತ್ರಗಳು ಮತ್ತು ಆಂಬುಲೆನ್ಸ್ ಸೇರಿದಂತೆ ಭಾರಿ ಯಂತ್ರಗಳು ತೆರಳಲು ಸಹಾಯವಾಗಿದೆ ಎಂದು ತಿಳಿದುಬಂದಿದೆ.
ಭೂಕುಸಿತ ಪೀಡಿತ ಪ್ರದೇಶಗಳಾದ ಅಟ್ಟಮಲ ಮತ್ತು ಆರನ್ಮಲ, ಮುಂಡಕ್ಕೈ, ಪುಂಚಿರಿಮಟ್ಟಂ, ವೆಳ್ಳರಿಮಲ ಗ್ರಾಮ, ಜಿವಿಎಚ್‌ಎಸ್‌ಎಸ್ ವೆಳ್ಳರಿಮಲ ಮತ್ತು ನದಿ ತೀರಗಳು ಸೇರಿದಂತೆ ಒಟ್ಟು 6 ವಲಯಗಳಲ್ಲಿ 40 ತಂಡಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿವೆ. ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ನೌಕಾಪಡೆ, ರಕ್ಷಣಾ ಬೆಂಬಲ ಗುಂಪು (ಡಿಎಸ್‌ಜಿ) ಕೋಸ್ಟ್ ಗಾರ್ಡ್, ಎಂಇಜಿ ಸಿಬ್ಬಂದಿ, ಮೂವರು ಸ್ಥಳೀಯರು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡವು ಜಂಟಿ ಕಾರ್ಯಾಚರನೆ ನಡೆಸುತ್ತಿವೆ.