ಬೆಂಗಳೂರು: ಸಾರ್ವಜನಿಕರಿಗೆ ‘ವರ್ಕ್ ಫ್ರಮ್ ಹೋಮ್” ಕೆಲಸ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಹಣವನ್ನು ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ 11 ಮಂದಿ ಅಂತರಾಜ್ಯ ಆರೋಪಿಗಳನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ ಅವರು ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಬಡ್ಡಿದರ ನೀಡುವ ಆಸೆ ತೋರಿಸಿ ಹಣವನ್ನು ಹೂಡಿಕೆ ಮಾಡಲು ಜನರಿಗೆ ಆಮಿಷವೊಡ್ಡುತ್ತಿದ್ದ 11 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.. ದೇಶಾದ್ಯಂತ ವರದಿಯಾದ 2,143 ಪ್ರಕರಣಗಳಲ್ಲಿ ಈ ಬಂಧಿತರು ಆರೋಪಿಗಳು ಶಾಮೀಲಾಗಿದ್ದಾರೆ. ಈ 11 ಮಂದಿ ಕರ್ನಾಟಕದಲ್ಲಿ 158.94 ಕೋಟಿ ರೂ. ವಂಚಿಸಿದ್ದಾರೆ ಕರ್ನಾಟಕದಲ್ಲಿ ಈ ಗ್ಯಾಂಗ್ ಕನಿಷ್ಠ 265 ಜನರನ್ನು ವಂಚಿಸಿದ್ದು, ಅವರಲ್ಲಿ 135 ಮಂದಿ ಬೆಂಗಳೂರಿನವರಾಗಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಗೃಹಿಣಿಯರು ಮತ್ತು ಇತರರಿಗೆ ಮನೆಯಿಂದ ಕೆಲಸ ನೀಡುವ ಮೂಲಕ ಟಾರ್ಗೆಟ್ ಮಾಡುತ್ತಿದ್ದರು. ಅವರು ಆರಂಭದಲ್ಲಿ ತಾವು ಮಾಡುವ ಸಣ್ಣ ಹೂಡಿಕೆಗಳಿಗೆ ಹೆಚ್ಚಿನ-ಬಡ್ಡಿ ದರಗಳನ್ನು ನೀಡುತ್ತಿದ್ದರು. ಸಂತ್ರಸ್ತರು ಬಲೆಗೆ ಬಿದ್ದು ಹೆಚ್ಚು ಹೂಡಿಕೆ ಮಾಡಲು ಪ್ರಾರಂಭಿಸಿದ ನಂತರ, ಆರೋಪಿಗಳು ಬ್ಯಾಂಕ್‌ಗಳಿಂದ ಹಣವನ್ನು ಪಡೆದು ಪರಾರಿಯಾಗುತ್ತಿದ್ದರು.
ಆರೋಪಿಗಳಲ್ಲಿ ನಾಲ್ವರು ಮಹಾರಾಷ್ಟ್ರದವರು, ಐವರು ತೆಲಂಗಾಣ ಮತ್ತು ಇಬ್ಬರು ಕರ್ನಾಟಕದವರು. ಈ ಆರೋಪಿಗಳು 28 ರಾಜ್ಯಗಳ ಸಂತ್ರಸ್ತರಿಗೆ ವಂಚಿಸಿದ್ದಾರೆ. ಸಂತ್ರಸ್ತರಿಗೆ ವಂಚಿಸಲು ಬಳಸಿದ ಅದೇ 30 ಬ್ಯಾಂಕ್ ಖಾತೆ ಸಂಖ್ಯೆಗಳ ಆಧಾರದ ಮೇಲೆ 2,143 ಪ್ರಕರಣಗಳನ್ನು ದಾಖಲಿಸಲಾಗಿದೆ. ಎಲ್ಲಾ 30 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಉಳಿದ ಹಣವನ್ನು ಗ್ಯಾಂಗ್ ಹಿಂಪಡೆದಿದ್ದರಿಂದ ಪೊಲೀಸರು ಕೇವಲ 62 ಲಕ್ಷ ರೂ. ಮಾತ್ರ ವಶಕ್ಕೆ ಪಡೆಯಲಾಗಿದೆ. ಹನ್ನೊಂದು ಮೊಬೈಲ್ ಫೋನ್‌ಗಳು, ಎರಡು ಲ್ಯಾಪ್‌ಟಾಪ್‌ಗಳು, ಸಿಮ್ ಕಾರ್ಡ್‌ಗಳು, ಚೆಕ್ ಬುಕ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು 11 ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಗ್ಯಾಂಗ್ ಒಂದು ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯವಾಗಿದೆ. ಎನ್‌ಸಿಆರ್‌ಬಿ ಪೋರ್ಟಲ್‌ನಿಂದ 2,143 ಪ್ರಕರಣಗಳ ವಿವರಗಳನ್ನು ಪಡೆಯಲಾಗಿದೆ. ಕರ್ನಾಟಕದಲ್ಲಿ 265 ಮಂದಿಗೆ ವಂಚಿಸಿದ ಗ್ಯಾಂಗ್, ಬೆಂಗಳೂರಿನಲ್ಲಿ 135 ಮಂದಿಗೆ ಪಂಗನಾಮ ಹಾಕಿದ್ದಾರೆ.
ಆರೋಪಿಗಳ ವಿರುದ್ಧ ಬೆಂಗಳೂರಿನ 14 ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. 11 ಆರೋಪಿಗಳ ಪೈಕಿ ಕೆಲವರು ಖಾತೆದಾರರಾಗಿದ್ದಾರೆ. ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿರುವ ಹೆಚ್ಚಿನ ಗ್ಯಾಂಗ್‌ಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ. ಎಲ್ಲಾ 11 ಆರೋಪಿಗಳನ್ನು ಬಂಧಿಸಿರುವುದು ಇದೇ ಮೊದಲು. ಗ್ಯಾಂಗ್‌ನ ವಿಧಾನ ಒಂದೇ ಆಗಿರುತಿತ್ತು. ಎಲ್ಲಾ 30 ಖಾತೆ ಸಂಖ್ಯೆಗಳು ಸಹ ಒಂದೇ ಆಗಿರುತ್ತವೆ. ಇದು ಬಹಳ ಸುಸಜ್ಜಿತವಾದ ಸಂಘಟಿತ ಅಪರಾಧ ಸಿಂಡಿಕೇಟ್ ಆಗಿದೆ. ಅವರು ವಿಭಿನ್ನ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದ್ದರು ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದರು.