ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ.ಬಿ.ಆರ್.ಅಂಬೇಡ್ಕರ್, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳ 2024-25ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ವಿಶೇಷ ವರ್ಗಗಳ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ನೇರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನವಾಗಿದೆ.
ಸಫಾಯಿ ಕರ್ಮಚಾರಿಗಳ ಮಕ್ಕಳು, ಶೇ.25ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ವಿಶೇಷ ಚೇತನ ಮಕ್ಕಳು, ಒಬ್ಬ ಪೋಷಕರನ್ನು ಹೊಂದಿರುವ ಮಕ್ಕಳು, ಚಿತಾಗಾರದ ಕಾರ್ಮಿಕರ ಮಕ್ಕಳು, ಅನಾಥ ಮಕ್ಕಳು, ಸ್ಮಶಾನ ಕಾರ್ಮಿಕ ಮಕ್ಕಳು, ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಗೆ ಸೇರಿದ ಮಕ್ಕಳು, ಮ್ಯಾನ್ಯುಯಲ್ ಸ್ಕ್ಯಾವೆಂಜೆರ್‍ಗಳ ಮಕ್ಕಳು, ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು, ಬಾಲ ಕಾರ್ಮಿಕ ಮಕ್ಕಳು, ಸೇವಾನಿರತ ಸೈನಿಕರ ಮಕ್ಕಳು, ಜೀತವಿಮುಕ್ತ ಮಕ್ಕಳು, ನಿವೃತ್ತ ಸೈನಿಕ ಸಿಬ್ಬಂದಿ ಮಕ್ಕಳು, ರಕ್ಷಿಸಲ್ಪಟ್ಟ ದೇವದಾಸಿಯರ ಮಕ್ಕಳು, ಎಸ್.ಸಿ, ಎಸ್.ಟಿ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು ಹಾಗೂ ಹೆಚ್.ಐ.ವಿ ಗೆ ತುತ್ತಾದ ಪೋಷಕರ ಮಕ್ಕಳು ಮಕ್ಕಳು ಕೆಇಎ ವೆಬ್‍ಸೈಟ್ https://cetonline.karnataka.gov.in/kreis24d/ ನಲ್ಲಿ ವಿದ್ಯಾರ್ಥಿಯ ಎಸ್‍ಎಟಿಎಸ್ ಸಂಖ್ಯೆ ದಾಖಲಿಸಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಪಡೆದ ವಿಶೇಷ ವರ್ಗದ ಪ್ರಮಾಣಪತ್ರವನ್ನು ಅಪ್ಲೋಡ್ ಮಾಡಿದಾಗ ತಮ್ಮ ವಿಶೇಷ ವರ್ಗಕ್ಕೆ ಲಭ್ಯವಿರುವ ಸೀಟುಗಳ ವಿವರ ಲಭಿಸುತ್ತದೆ. ಒಂದು ವೇಳೆ ನಿಗದಿತ ವಿಶೇಷ ವರ್ಗಕ್ಕೆ ಸೀಟು ಲಭ್ಯವಿಲ್ಲದೇ ಇದ್ದಲ್ಲಿ ಸೀಟುಗಳ ಸಂಖ್ಯೆ 0 ಎಂದು ಪ್ರದರ್ಶಿತವಾಗುತ್ತದೆ. ಸೀಟು ಲಭ್ಯವಿದ್ದಲ್ಲಿ ಅಭ್ಯರ್ಥಿಯ ದಾಖಲಾತಿ ಆದೇಶವನ್ನು ಮುದ್ರಿಸಿಕೊಂಡು ಸಂಬಂಧಪಟ್ಟ ವಸತಿ ಶಾಲೆಯಲ್ಲಿ ಪ್ರವೇಶ ಪಡೆಯಬಹುದಾಗಿದೆ.
ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಟ್ಟಿರುವ ಸ್ಥಾನಗಳಲ್ಲಿ 565 ಸ್ಥಾನಗಳು ಪ್ರಸ್ತುತ ಖಾಲಿ ಇವೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಕ್ರೈಸ್ (KREIS) ವಸತಿ ಶಾಲೆಯ ಪ್ರಾಂಶುಪಾಲರನ್ನು ಅಥವಾ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ “ಕಲ್ಯಾಣ ಮಿತ್ರ” ಸಂಖ್ಯೆ 9482300400 ಗೆ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ತಿಳಿಸಿದ್ದಾರೆ.