ಹೈದರಾಬಾದ್ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ 35 ಮಂದಿ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದಲ್ಲಿ ಮಳೆ ಸಂಬಂಧಿತ ಅವಘಡಗಳಿಂದಾಗಿ 19 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ತೆಲಂಗಾಣದಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ 16 ಮಂದಿ ಮೃತಪಟ್ಟಿದ್ದಾರೆ. ಎರಡೂ ರಾಜ್ಯಗಳಲ್ಲಿ 47,000 ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಸೇರಿದಂತೆ ಒಟ್ಟು 47 ರಕ್ಷಣಾ ತಂಡಗಳು ರಾಜ್ಯದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದಿಲಾಬಾದ್, ಮಂಚೇರಿಯಲ್, ಖಮ್ಮಂ, ಸೂರ್ಯಪೇಟ್, ಕೊಮಾರಂ ಭೀಮ್ ಆಸಿಫಾಬಾದ್, ಪೆದ್ದಪಲ್ಲಿ, ಜಯಶಂಕರ್ ಭೂಪಾಲಪಲ್ಲಿ, ಮುಲುಗು, ಭದ್ರಾದ್ರಿ ಕೊತಗುಡೆಂ, ಮತ್ತು ಮಹಬೂಬಾಬಾದ್ ಸೇರಿದಂತೆ ತೆಲಂಗಾಣದ 10 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು, ರಾಜ್ಯದಲ್ಲಿ ಸಂಭವಿಸಿದ ಪ್ರವಾಹವನ್ನು ಅದರಲ್ಲೂ ವಿಶೇಷವಾಗಿ ವಿಜಯವಾಡದಲ್ಲಿ ಅವಘಡ ರಾಜ್ಯ ಕಂಡ “ದೊಡ್ಡ ದುರಂತ”. ಸದ್ಯ ಎನ್‌ಟಿಆರ್ ಜಿಲ್ಲೆಯ ಕಲೆಕ್ಟರೇಟ್‌ನಲ್ಲಿ ತಂಗಿರುವ ಅವರು ಆಂಧ್ರಪ್ರದೇಶದ ಪ್ರವಾಹವನ್ನು ನೈಸರ್ಗಿಕ ವಿಕೋಪ ಎಂದು ಘೋಷಿಸಲು ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು, ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದಾಗಿ ಇದುವರೆಗೆ 5,000 ಕೋಟಿ ರೂಪಾಯಿಗೂ ಹೆಚ್ಚು ಹಾನಿಯಾಗಿದೆ. ಕೇಂದ್ರದಿಂದ 2,000 ಕೋಟಿ ರೂಪಾಯಿಗಳ ತಕ್ಷಣದ ಪರಿಹಾರ ನೆರವು ಕೋರಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.