ದೆಹಲಿ: ಪಸ್ತುತ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಿದ ಪರಿಣಾಮ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಆದ್ದರಿಂದ ನ. 10 ರವರೆಗೆ ಶಾಲೆಗಳನ್ನು ಮುಚ್ಚುವಂತೆ ದೆಹಲಿ ಶಿಕ್ಷಣ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅತಿಶಿ ಘೋಷಣೆ ಮಾಡಿದ್ದಾರೆ.
ಅವರು ಎಕ್ಸ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 6-12ನೇ ತರಗತಿವರೆಗೆ ಆನ್ಲೈನ್ ತರಗತಿಗೆ ಅವಕಾಶ ನೀಡಲಾಗುತ್ತದೆ. ದೆಹಲಿಯ ವಾತಾವರಣ ಹದಗೆಟ್ಟಿದ್ದು, ವಾಯುಮಾಲಿನ್ಯ ಹೆಚ್ಚುತ್ತಿರುವುದರಿಂದ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ ಎಂದರು.
ಇನ್ನು ಇದಕ್ಕೂ ಮೊದಲು, ದೆಹಲಿ ಸರ್ಕಾರವು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಶಾಲೆಗಳನ್ನು ನ. 2 ರವರೆಗೆ ಮುಚ್ಚುವಂತೆ ಆದೇಶ ನೀಡಿತ್ತು.
ದೆಹಲಿಯಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 460 ಇತ್ತು. ಕೃಷಿ ಬೆಂಕಿ ಮತ್ತು ಪ್ರತಿಕೂಲ ಹವಾಮಾನ, ಗಾಳಿಯ ವೇಗ ಕಡಿಮೆಯಾಗುವ ಹಿನ್ನೆಲೆ ಮುಂದಿನ 15 ರಿಂದ 20 ದಿನಗಳ ಕಾಲ ತೀವ್ರ ಪ್ರಮಾಣದಲ್ಲಿ ವಾಯು ಮಾಲಿನ್ಯ ಕಂಡು ಬರಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಇದೀಗ ವರದಿಯ ಬೆನ್ನಲ್ಲೇ ನಗರದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿ, ಜನರು ಉಸಿರಾಡಲು ಕಷ್ಟಪಡುವಂತಾಗಿದೆ.