ಬೆಂಗಳೂರು: ಯುವ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಇತ್ತೀಚೆಗೆ ಹೇಳಿ ಸಾಕಷ್ಟು ಚರ್ಚೆ ಹುಟ್ಟುಹಾಕಲು ಕಾರಣರಾಗಿದ್ದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ವಾರದಲ್ಲಿ 70 ಗಂಟೆಗಳ ಕೆಲಸ ಮಾಡುವಂತೆ ನಾನು ನೀಡಿದ್ದ ಸಲಹೆಯನ್ನು ನನ್ನ ಪಾಶ್ಚಿಮಾತ್ಯ ಸ್ನೇಹಿತರು ಹಾಗೂ ಕೆಲವು ಅನಿವಾಸಿ ಭಾರತೀಯರು ಒಪ್ಪಿದ್ದಾರೆ ಎಂದರು.
70 ಗಂಟೆಗಳ ಕೆಲಸ ಮಾಡುವಂತೆ ನಾನು ನೀಡಿದ್ದ ಸಲಹೆಯನ್ನು ಬಹಳಷ್ಟು ಪಾಶ್ಚಿಮಾತ್ಯ ಸ್ನೇಹಿತರು, ಬಹಳಷ್ಟು ಎನ್‍ಆರ್‍ಐಗಳು, ಭಾರತದಲ್ಲಿ ಬಹಳಷ್ಟು ಒಳ್ಳೆಯ ಜನರು ಕೇಳಿ ಸಂತೋಪಪಟ್ಟಿದ್ದಾರೆ. ನನ್ನ ಪತ್ನಿ ಸುಧಾಮೂರ್ತಿ ಅವರು ಕುಟಂಬಕ್ಕೆ ವಾರದಲ್ಲಿ 70 ಗಂಟೆ ಕೆಲಸ ಮಾಡುತ್ತಾರೆ ಒಟ್ಟಾರೆ ಅವರು ವಾರದಲ್ಲಿ 90 ಗಂಟೆಗಳಷ್ಟು ಕಾಲ ನಿಯಮಿತವಾಗಿ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದಾರೆ ಎಂದರು.
ಇನ್ನು ನಾನು ಆರೂವರೆ ದಿನ ಕೆಲಸಕ್ಕೆ ಹೋಗುತ್ತಿದ್ದೆ, ಎಲೆಕ್ಟ್ರಾನಿಕ್ಸ್ ಸಿಟಿಯಲ್ಲೂ ಸಹ, ನಾನು ಆರೂವರೆ ದಿನ ಕೆಲಸ ಮಾಡುತ್ತಿದ್ದೆ. ಮತ್ತು ಪ್ರತಿದಿನ ನಾನು ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಡುತ್ತಿದ್ದೆ. ನಾನು 6.20 ಕ್ಕೆ ಕಚೇರಿ ತಲುಪುತ್ತಿದ್ದ ಮತ್ತು ನಾನು ಸಂಜೆ ಸುಮಾರು 8.15 ಇಲ್ಲವೇ 8.30 ಕ್ಕೆ ಅಲ್ಲಿಂದ ಹೊರಡುತ್ತೇನೆ ಎಂದು ಹೇಳಿದ್ದಾರೆ.