ಬೆಂಗಳೂರು: ಡಿಎಲ್ ಅವಧಿ ಮುಗಿದ 30 ದಿನದೊಳಗೆ ನವೀಕರಣ ಮಾಡಿಸಿಕೊಳ್ಳಬೇಕು. ಒಂದು ವೇಳೆ ಅರ್ಜಿ ಸಲ್ಲಿಸದಿದ್ದಲ್ಲಿ ಅಪಘಾತ ಸಂಭವಿಸಿದರೆ ಅದರ ಪೂರ್ಣ ಹೊಣೆಯನ್ನು ವಾಹನ ಚಾಲಕ ಹೊರಬೇಕು, ವಾಹನದ ಮಾಲೀಕ ಸಂತ್ರಸ್ತರಿಗೆ ಕೈಯಿಂದ ಪರಿಹಾರ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ.
ಡಿಎಲ್ ಪರವಾನಿಗೆ ಮುಗಿದ ದಿನದಿಂದ 30 ದಿನದಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಬಗ್ಗೆ ಸಾಕ್ಷ್ಯ ಒದಗಿಸದ ಅಂಶ ಪರಿಗಣಿಸಿರುವ ಹೈಕೋರ್ಟ್ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಆಂಬುಲೆನ್ಸ್ ಚಾಲಕನ ಮೇಲೆ ಮೋಟಾರು ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ ಹೊರಿಸಿದ್ದ ಶೇಕಡ 50ರಷ್ಟು ಹೊಣೆಗಾರಿಕೆಯನ್ನು ಶೇಖಡ 100ಕ್ಕೆ ಹೆಚ್ಚಳ ಮಾಡಿ ಆದೇಶಿಸಿದೆ.
ಅಪಘಾತ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರ ಪೀಠ ಈ ಆದೇಶ ನೀಡಿದೆ.
2010 ರ ಮೇ 29ರಂದು ಚಿತ್ರದುರ್ಗದ ಜೋಗಿಮಟ್ಟಿ ಸಮೀಪ ಮಹೇಂದ್ರ ಮ್ಯಾಕ್ಸಿಕ್ಯಾಬ್ ಮತ್ತು ಆಂಬುಲೆನ್ಸ್ ನಡುವೆ ಅಪಘಾತ ನಡೆದು ಎಂಟು ಜನ ಗಾಯಗೊಂಡಿದ್ದರು. ಆಂಬುಲೆನ್ಸ್ ಚಾಲಕನ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆಂಬುಲೆನ್ಸ್ ಸುಗಮ ಸಂಚಾರಕ್ಕೆ ಮ್ಯಾಕ್ಸಿ ಕ್ಯಾಬ್ ಚಾಲಕ ದಾರಿ ಮಾಡಿಕೊಡದ ಹಿನ್ನೆಲೆಯಲ್ಲಿ ಅಪಘಾತ ಉಂಟಾಗಿದೆ ಎಂದು ನ್ಯಾಯಾಧೀಕರಣ ನಿರ್ಧರಿಸಿ ಕ್ಯಾಬ್ ಮತ್ತು ಆಂಬುಲೆನ್ಸ್ ಚಾಲಕನ ಮೇಲೆ ತಲಾ ಶೇಕಡ 50ರಷ್ಟು ಅಪಘಾತದ ಹೊಣೆಗಾರಿಕೆ ನಿಗದಿಪಡಿಸಿ 2012ರ ಏಪ್ರಿಲ್ 18ರಂದು ಆದೇಶ ನೀಡಿತ್ತು.
ಗಾಯಗೊಂಡವರಿಗೆ ಶೇಕಡ 50:50 ಅನುಪಾತದಲ್ಲಿ ಪರಿಹಾರ ಪಾವತಿಸುವಂತೆ ಎರಡು ವಾಹನಗಳಿಗೆ ವಿಮಾ ಪಾಲಿಸಿ ವಿತರಿಸಿದ್ದ ಕಂಪನಿಗಳಿಗೆ ನಿರ್ದೇಶನ ನೀಡಲಾಗಿತ್ತು. ಈ ಆದೇಶ ಪ್ರಶ್ನಿಸಿ ವಿಮೆ ಪಾಲಿಸಿ ವಿತರಿಸಿದ್ದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.
ಕಂಪನಿಯ ಪರ ವಕೀಲರು ಅಪಘಾತ ನಡೆದ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕನ ಡಿಎಲ್ ಪರವಾನಿಗೆ ಅವಧಿ ಮುಗಿದಿತ್ತು ಆದ್ದರಿಂದ ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಹೊರಿಸಿದ ಶೇಕಡ 50ರಷ್ಟು ಹೊಣೆಗಾರಿಕೆಯನ್ನು ಆಂಬುಲೆನ್ಸ್ ಮಾಲೀಕರ ಮೇಲೆ ವರ್ಗಾಯಿಸಬೇಕು ಎಂದು ಹೇಳಿದ್ದಾರೆ.
ನಿಯಮಗಳ ಪ್ರಕಾರ ಡಿಎಲ್ ನವೀಕರಣಕ್ಕೆ ಮೂವತ್ತು ದಿನ ಕಾಲಾವಕಾಶ ಇರುತ್ತದೆ. ಕಾರ್ಯ ವಿಧಾನ ವಿಳಂಬ ಸಾಧ್ಯತೆ ಕಾರಣ ಎಂದು ಆಂಬುಲೆನ್ಸ್ ಗೆ ವಿಮೆ ಪಾಲಿಸಿ ನೀಡಿದ ಕಂಪನಿ ಹೇಳಿದೆ. ಆಂಬುಲೆನ್ಸ್ ವಿಮೆ ಕಂಪನಿಯ ವಕೀಲರ ವಾದ ಸ್ವೀಕಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ಪ್ರಕರಣದಲ್ಲಿ ಆಂಬುಲೆನ್ಸ್ ಚಾಲಕನ ಪರವಾನಿಗೆ ಅವಧಿ ಮುಗಿದ ನಂತರ 30 ದಿನದೊಳಗೆ ನವೀಕರಣಕ್ಕೆ ಆರ್ಟಿಒ ಗೆ ಅರ್ಜಿ ಸಲ್ಲಿಸಿದ್ದರೂ ಈ ಪ್ರಕ್ರಿಯೆ ಬಾಕಿ ಇತ್ತು ಎನ್ನುವುದಕ್ಕೆ ಸಾಕ್ಷ ಒದಗಿಸಿಲ್ಲ. ಅಪಘಾತ ನಡೆದ ವೇಳೆ ಚಾಲಕ ಅಧಿಕೃತ ಡಿಎಲ್ ಹೊಂದಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಇದರಿಂದ ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲಿದ್ದ ಶೇಕಡ 50ರಷ್ಟು ಹೊಣೆಗಾರಿಕೆಯನ್ನು ಆಂಬುಲೆನ್ಸ್ ಚಾಲಕನ ಮೇಲೆ ಹೋರಿಸುವುದು ಸೂಕ್ತವೆಂದು ಹೈಕೋರ್ಟ್ ತೀರ್ಮಾನಿಸಿದೆ. ಗಾಯಾಳುಗಳಿಗೆ ಸುಮಾರು 10 ಲಕ್ಷ ರೂಪಾಯಿ ಪರಿಹಾರವನ್ನು ಶೇಕಡ 6ರ ಬಡ್ಡಿ ದರದಲ್ಲಿ ಆಂಬುಲೆನ್ಸ್ ಮಾಲೀಕ ಪಾವತಿಸಬೇಕು. ವಿಮೆ ನೀಡಿದ ಕಂಪನಿ ಕೂಡ ಯಾವುದೇ ಪರಿಹಾರ ಪಾವತಿಸುವಂತಿಲ್ಲ ಎಂದು ಆದೇಶ ನೀಡಿದೆ.