ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ಇನ್ನು ಮುಂದೆ ವರ್ಡ್ಪ್ಯಾಡ್ಗೆ ಯಾವುದೇ ಅಪ್ಡೇಟ್ ನೀಡುವುದಿಲ್ಲ ಎಂದು ಘೋಷಿಸಿದೆ. ಅಲ್ಲದೆ ಸುಮಾರು 30 ವರ್ಷಗಳ ನಂತರ ವಿಂಡೋಸ್ನ ಭವಿಷ್ಯದ ಆವೃತ್ತಿಗಳಿಂದ ವರ್ಡ್ ಪ್ರೊಸೆಸರ್ ಅನ್ನು ತೆಗೆದುಹಾಕುವುದಾಗಿ ತಿಳಿಸಿದೆ.
ಪರ್ಯಾಯವಾಗಿ, ಮೈಕ್ರೋಸಾಫ್ಟ್ ತನ್ನ ಪಾವತಿಸಿದ ವರ್ಡ್ ಪ್ರೊಸೆಸರ್ ಎಂಎಸ್ ವರ್ಡ್ ಅನ್ನು ಬಳಸುವಂತೆ ಹೇಳಿದೆ. ವರ್ಡ್ ಪ್ಯಾಡ್ಗಿಂತ ತುಂಬಾ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ಬಳಸಲು ಸುಲಭವಾದ ಎಂಎಸ್ ವರ್ಡ್ 1995 ರಿಂದ ವಿಂಡೋಸ್ನೊಂದಿಗೆ ಲಭ್ಯವಾಗುತ್ತಿದೆ.
“ವರ್ಡ್ಪ್ಯಾಡ್ ಗೆ ಇನ್ನು ಮುಂದೆ ಅಪ್ಡೇಟ್ಗಳು ಬರಲಾರವು ಮತ್ತು ವಿಂಡೋಸ್ನ ಭವಿಷ್ಯದ ಆವೃತ್ತಿಗಳಿಂದ ಅದನ್ನು ತೆಗೆದುಹಾಕಲಾಗುವುದು. .doc ಮತ್ತು .rtf ನಂತಹ ರಿಚ್ ಟೆಕ್ಸ್ಟ್ ಡಾಕ್ಯುಮೆಂಟ್ ತಯಾರಿಸಲು ಮೈಕ್ರೋಸಾಫ್ಟ್ ವರ್ಡ್ ಮತ್ತು .txt ನಂತಹ ಸರಳ ಟೆಕ್ಸ್ಟ್ ಫೈಲ್ ತಯಾರಿಸಲು ವಿಂಡೋಸ್ ನೋಟ್ ಪ್ಯಾಡ್ ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ” ಎಂದು ಮೈಕ್ರೋಸಾಫ್ಟ್ ಶುಕ್ರವಾರ ಪ್ರಕಟಿಸಿದ ಸಪೋರ್ಟ್ ನೋಟ್ನಲ್ಲಿ ಹೇಳಲಾಗಿದೆ.
ನೋಟ್ ಪ್ಯಾಡ್ನಲ್ಲಿ ಆಟೋಸೇವ್ ಮತ್ತು ಟ್ಯಾಬ್ ಹಿಂತೆಗೆದುಕೊಳ್ಳುವಿಕೆಯಂತಹ ವೈಶಿಷ್ಟ್ಯಗಳ ಅಪ್ಡೇಟ್ ನೀಡಿದ ಒಂದು ದಿನದ ನಂತರ ಮೈಕ್ರೋಸಾಫ್ಟ್ ತನ್ನ ವರ್ಡ್ ಪ್ಯಾಡ್ ಬಗ್ಗೆ ಹೊಸ ಮಾಹಿತಿ ನೀಡಿದೆ. ವಿಂಡೋಸ್ 11 ನಲ್ಲಿನ ವಿಂಡೋಸ್ ನೋಟ್ ಪ್ಯಾಡ್ ಅಪ್ಲಿಕೇಶನ್ ಅನ್ನು ಅನೇಕ ವರ್ಷಗಳ ನಂತರ 2018 ರಲ್ಲಿ ಮೊದಲ ಬಾರಿಗೆ ಅಪ್ಡೇಟ್ ಮಾಡಲಾಗಿತ್ತು ಮತ್ತು ಟ್ಯಾಬ್ಗಳನ್ನು ಸೇರಿಸಲಾಗಿತ್ತು.
ಕಳೆದ ತಿಂಗಳು ಐಒಎಸ್ ಮತ್ತು ಆಂಡ್ರಾಯ್ಡ್ ನಂತರ, ಮೈಕ್ರೋಸಾಫ್ಟ್ ಈಗ ವಿಂಡೋಸ್ 11 ನಲ್ಲಿ ತನ್ನ ಡಿಜಿಟಲ್ ಸಹಾಯಕ ಕೊರ್ಟಾನಾ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಸ್ವತಂತ್ರ ಅಪ್ಲಿಕೇಶನ್ ಆಗಿ ವಿಂಡೋಸ್ನಲ್ಲಿ ಕೊರ್ಟಾನಾ ಅನ್ನು ತೆಗೆದುಹಾಕಲಾಗಿದ್ದರೂ, ಟೀಮ್ಸ್ ಮೊಬೈಲ್, ಮೈಕ್ರೋಸಾಫ್ಟ್ ಟೀಮ್ಸ್ ಡಿಸ್ ಪ್ಲೇ ಮತ್ತು ಮೈಕ್ರೋಸಾಫ್ಟ್ ಟೀಮ್ಸ್ ರೂಮ್ ಗಳಲ್ಲಿ ಕೊರ್ಟಾನಾಗೆ ಸಪೋರ್ಟ್ 2023 ರಲ್ಲಿ ಕೊನೆಗೊಳ್ಳುತ್ತದೆ. ಜೂನ್ನಲ್ಲಿ ವಿಂಡೋಸ್ 11 ನಲ್ಲಿ ಫೈಲ್ ಎಕ್ಸ್ಪ್ಲೋರರ್ ಸೆಟ್ಟಿಂಗ್ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಮೈಕ್ರೋಸಾಫ್ಟ್ ಫೈಲ್ ಎಕ್ಸ್ಪ್ಲೋರರ್ನಲ್ಲಿ ಫೋಲ್ಡರ್ ಆಯ್ಕೆಗಳ ಅಡಿಯಲ್ಲಿ ಕೆಲ ಹಳೆಯ ಸೆಟ್ಟಿಂಗ್ಗಳನ್ನು ತೆಗೆದುಹಾಕಿದೆ.