ಬೆಂಗಳೂರು:ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭ ಗೋಧ್ರಾ ಮಾದರಿ ದುರ್ಘಟನೆಗೆ ಸಂಚು ನಡೆಯುತ್ತಿದೆ ಎಂಬ ಹೇಳಿಕೆ ಕುರಿತು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ವಿಚಾರಣೆಗೆ ಸಿಸಿಬಿ ಪೊಲೀಸರು ಶುಕ್ರವಾರ ಬೆಳಿಗ್ಗೆ ಯತ್ನಿಸಿದ್ದು, ಇದಕ್ಕೆ ಬಿ.ಕೆ. ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿದ್ದ ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ ಸಿಸಿಬಿ ಎಸಿಪಿ ಮತ್ತು ಇತರ ಅಧಿಕಾರಿಗಳು ಹಿಂದಿನ ಹೇಳಿಕೆ ಕುರಿತು ವಿವರಣೆ ದಾಖಲಿಸಿಕೊಳ್ಳಲು ಬಂದಿರುವುದಾಗಿ ತಿಳಿಸಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹರಿಪ್ರಸಾದ್ ಅವರು ರಾಜ್ಯದ ಜನರ ಸುರಕ್ಷತೆ ದೃಷ್ಟಿಯಿಂದ ಹೇಳಿಕೆ ನೀಡಿದ್ದೆ.ಈಗ ನನಗೆ ವಿವಿಐಪಿ ಆತಿಥ್ಯ ಬೇಕಿಲ್ಲ. ಪ್ರಕರಣ ದಾಖಲಿಸಿ, ವಾರೆಂಟ್ ತಂದು ಠಾಣೆಗೆ ಕರೆದೊಯ್ಯಿರಿ.ಅಲ್ಲಿಯೇ ವಿವರಣೆ ನೀಡುತ್ತೇನೆ’ ಎಂದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಯಾವ ಸರ್ಕಾರದಲ್ಲಿ ನಾವು ಇದ್ದೇವೆ ಎಂಬ ಅನುಮಾನ ಮೂಡುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ದೀರ್ಘ ಕಾಲದಿಂದ ಪಕ್ಷಕ್ಕೆ ಕೆಲಸ ಮಾಡಿದ ನನಗೇ ಹೀಗಾದರೆ ಪಕ್ಷದ ಸಾಮಾನ್ಯ ಕಾರ್ಯಕರ್ತರ ಸ್ಥಿತಿ ಏನು’ ಎಂದು ಪ್ರಶ್ನಿಸಿದ್ದಾರೆ.