ನವದೆಹಲಿ: ಕ್ರೈಸ್ತ ಧರ್ಮದ ಸಂಸ್ಥೆಗಳು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದೂ ಧರ್ಮದ ವಿದ್ಯಾರ್ಥಿಗಳ ಮೇಲೆ ಕ್ರೈಸ್ತ ಧರ್ಮದ ಸಂಪ್ರದಾಯ ಹೇರದಂತೆ ಭಾರತೀಯ ಕ್ಯಾಥೋಲಿಕ್ ಬಿಷಪ್ಸ್ ಸಮ್ಮೇಳನ (ಸಿಬಿಸಿಐ) ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಿಬಿಸಿಐ ಈ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟುಮಾಡದಂತೆ, ಒಳಗೊಳ್ಳುವಿಕೆಯನ್ನು ಪೋಷಿಸುವುದು, ವಿಭಿನ್ನ ನಂಬಿಕೆಗಳನ್ನು ಗೌರವಿಸುವುದು ಮತ್ತು ಸಮಗ್ರ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಈ ಮಾರ್ಗಸೂಚಿಯನ್ನು ಹೊರಡಿಸಿದೆ.
ಈ ಮಾರ್ಗಸೂಚಿಯಲ್ಲಿ ವಿದ್ಯಾರ್ಥಿಗಳು ಎಲ್ಲಾ ನಂಬಿಕೆಗಳು ಹಾಗೂ ಸಂಪ್ರದಾಯಗಳಿಗೆ ಗೌರವ ನೀಡಬೇಕು. ವಿದ್ಯಾರ್ಥಿಗಳಿಗೆ ಸಂಪ್ರದಾಯ ಹೇರದಂತೆ ಸೂಚನೆ ನೀಡುವುದರ ಜೊತೆಗೆ ಸಿಬಿಸಿಐ ಶಾಲೆಗಳಲ್ಲಿ ಬೆಳಿಗ್ಗೆ ಪ್ರಾರ್ಥನೆ ವೇಳೆ ಸಂವಿಧಾನದ ಪೀಠಿಕೆ ಓದುವಂತೆ ಕೂಡ ಸಲಹೆಯನ್ನು ನೀಡಲಾಗಿದೆ. ಹಾಗೂ ಇತರೆ ಧರ್ಮೀಯ ವಿದ್ಯಾರ್ಥಿಗಳ ಮೇಲೆ ಕ್ರೈಸ್ತ ಸಂಪ್ರದಾಯಗಳನ್ನು ಹೇರಬಾರದು ಎಂದು ಸೂಚಿಸಲಾಗಿದೆ.
ಸಿಬಿಸಿಐ ನೀಡಿದ ಪ್ರಮುಖ ಮಾರ್ಗಸೂಚಿಗಳು:
- ಎಲ್ಲಾ ನಂಬಿಕೆ ಸಂಪ್ರದಾಯಗಳನ್ನು ತಾರತಮ್ಯವಿಲ್ಲದೆ ಶಾಲೆಗಳು ಗೌರವಿಸಬೇಕು.
- ಶಿಕ್ಷಣ ಸಂಸ್ಥೆಗಳು ಅನ್ಯ ಧರ್ಮೀಯ ವಿದ್ಯಾರ್ಥಿಗಳ ಮೇಲೆ ಕ್ರೈಸ್ತ ಸಂಪ್ರದಾಯವನ್ನು ಹೇರುವಂತಿಲ್ಲ.
- ಒಳಗೊಳ್ಳುವಿಕೆ ಮತ್ತು ಧಾರ್ಮಿಕ ಸಹಿಷ್ಣುತೆಗೆ ಉತ್ತೇಜನ ನೀಡಲು ಶಾಲಾ ಆವರಣಗಳಲ್ಲಿ ಅಂತರ್ ಧರ್ಮೀಯ ಪ್ರಾರ್ಥನಾ ಮಂದಿರವನ್ನು ನಿರ್ಮಿಸಬೇಕು.
- ಪ್ರತಿದಿನದ ಸಭೆಯಲ್ಲಿ ಪ್ರಾರ್ಥನೆ, ಭಾರತೀಯ ಸಂವಿಧಾನ ಪೀಠಿಕೆ ಓದುವುದು ಮುಂತಾದ ಚಟುವಟಿಕೆಗಳು ಸೇರಿದಂತೆ ಆಧ್ಯಾತ್ಮಿಕ ಹಾಗೂ ನೈತಿಕ ಬೆಳವಣಿಗೆಗೆ ಉತ್ತೇಜನ ನೀಡಬೇಕು.
- ಮಾನವೀಯತೆ, ಹೊಂದಾಣಿಕೆ, ನಾಯಕತ್ವದಂತಹ ಗುಣಗಳು ಹಾಗೂ ಮೌಲ್ಯಗಳನ್ನು ರೂಢಿಸುವುದು.
- ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಮಾನಸಿಕ ಆರೋಗ್ಯ ಹಾಗೂ ಯೋಗ ಕ್ಷೇಮಕ್ಕೆ ಆದ್ಯತೆ ಕೊಡಬೇಕು. ಮಕ್ಕಳ ಭಾವನಾತ್ಮಕ ಹಾಗೂ ದೈಹಿಕ ಅಗತ್ಯಗಳನ್ನು ಪೂರೈಸಲು ಕೌನ್ಸೆಲಿಂಗ್ ಸೇವೆಗಳು, ಆರೋಗ್ಯ ಸೌಲಭ್ಯಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
- ಸಿಬ್ಬಂದಿ ಕಲ್ಯಾಣಕ್ಕಾಗಿ ವೃತ್ತಿಪರ ಅಭಿವೃದ್ಧಿ, ಮೆಂಟರ್‌ಶಿಪ್ ಕಾರ್ಯಕ್ರಮಗಳು ಮತ್ತು ಆರೋಗ್ಯಕರ ಕೆಲಸ- ಜೀವನ ಸಮತೋಲನಕ್ಕೆ ಹಾಗೂ ಶಿಕ್ಷಕರ ನಡುವೆ ಸಹಯೋಗದ ಸಂಸ್ಕೃತಿ ಉತ್ತೇಜಿಸುವ ಸೇವೆಗಳನ್ನು ನಡೆಸಬೇಕು.