ಬೆಂಗಳೂರು: ಇತ್ತೀಚೆಗೆ ರಾಜ್ಯ ಬಿಜೆಪಿ ನೂತನ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ನೇಮಕದ ಬೆನ್ನಲ್ಲೇ ಇದೀಗ ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ ವಿರೋಧ ಪಕ್ಷಗಳ ನಾಯಕ, ಉಪನಾಯಕರನ್ನು ನೇಮಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋಟಾ ಶ್ರೀನಿವಾಸ್ ಪೂಜಾರಿ ಅವರು ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ, ಮೇಲ್ಮನೆ ಸದಸ್ಯ ಸುನೀಲ್ ವಲ್ಯಾಪುರೆ ವಿಧಾನ ಪರಿಷತ್ ವಿರೋಧಪಕ್ಷದ ಉಪನಾಯಕರಾಗಿ, ಎನ್.ರವಿಕುಮಾರ್ ಅವರು ಮೇಲ್ಮನೆ ಮುಖ್ಯ ಸಚೇತಕರಾಗಿ ನೇಮಕಗೊಂಡಿದ್ದಾರೆ. ಇನ್ನು, ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾಗಿ ಅರವಿಂದ ಬೆಲ್ಲದ್, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಅವರನ್ನು ಬಿಜೆಪಿ ಮುಖ್ಯ ಸಚೇತಕರನ್ನಾಗಿ ನೇಮಿಸಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ ಅವರು ಪ್ರಕಟಣೆಯಲ್ಲಿ ಆದೇಶ ಹೊರಡಿಸಿದ್ದಾರೆ.