ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರದಲ್ಲಿ ಅಕ್ಕಿಕಳ್ಳ, ಟ್ರೈ ಜಂಕ್ಷನ್ ಕಿಂಗ್ ಎಂದೇ ಪ್ರಸಿದ್ದಿ ಪಡೆದ ವಿನಾಯಕನ್ ಎಂಬ ಗಂಡಾನೆ ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದೆ.
ಈ ವೇಳೆ ಆನೆಗೆ ವಿವಿಧ ಪಶು ವೈದ್ಯರು ಹಾಗೂ ಇತರ ಅರಣ್ಯ ಸಿಬ್ಬಂದಿ ವಿವಿಧ ರೀತಿಯಲ್ಲಿ ಚಿಕಿತ್ಸೆಯನ್ನು ನೀಡಿದರೂ ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.
2021 ರಲ್ಲಿ ಕೊಯಮತ್ತೂರಿನಲ್ಲಿ ಈ ಆನೆಯನ್ನು ಸೆರೆ ಹಿಡಿದು ತಮಿಳುನಾಡಿನ ಅರಣ್ಯ ಇಲಾಖೆ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿಬಿಡಲಾಗಿತ್ತು. ಈ ಆನೆ ಬಂಡೀಪುರದ ವಿವಿಧ ಮನೆಗಳಿಗೆ ನುಗ್ಗಿ ಅಕ್ಕಿ ,ತರಕಾರಿ, ತಿನ್ನುತ್ತಿದ್ದು ಹಲವು ಬೆಳೆಗಳನ್ನೂ ನಾಶ ಮಾಡಿದ ಕಾರಣ ಕರ್ನಾಟಕ ಅರಣ್ಯ ಇಲಾಖೆ ಇದನ್ನು ಸೆರೆಹಿಡಿದಿದ್ದು ರಾಮಾಪುರ ಆನೆ ಶಿಬಿರದಲ್ಲಿ ಇರಿಸಲಾಗಿತ್ತು.
ಮುಂದಿನ ದಸರಾ ಮಹೋತ್ಸವದಲ್ಲಿ ಅಂಬಾರಿಯನ್ನು ಹೊರಲು ಆನೆ ಸೂಕ್ತವಾಗಿದೆ ಎಂದು ತರಬೇತಿಯನ್ನು ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ಹಾಕಿಕೊಂಡಿತ್ತು. .
ಆದರೆ ಆನೆ ಇದ್ದಕ್ಕಿದ್ದಂತೆ ಪ್ರಾಣ ಬಿಟ್ಟಿದೆ. ಇಂದು ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಯಲಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.