ಬೆಂಗಳೂರು: ಚುನಾಯಿತ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡದಿದ್ದಾಗ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಜನರ ಧ್ವನಿಯಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನವಾದರೂ ವಿರೋಧ ಪಕ್ಷದ ಸ್ಥಾನ ಗಳಿಸಿರುವ ಬಿಜೆಪಿಯು ಪ್ರತಿಪಕ್ಷದ ನಾಯಕನ ಹುದ್ದೆ ಯಾರನ್ನು ಆಯ್ಕೆ ಮಾಡದೇ ಇರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಶನಿವಾರ ಲೀಗಲ್ ನೋಟಿಸ್ ಜಾರಿಯಾಗಿದೆ.
ಈ ಸಂಬಂಧ ವಕೀಲ ಎನ್ ಪಿ ಅಮೃತೇಶ್ ಅವರು ಬಿಜೆಪಿ ನಾಯಕರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.
ಬಿಜೆಪಿಯು ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಸಾಂವಿಧಾನಿಕ ಶೂನ್ಯ ವಾತಾವರಣ ನಿರ್ಮಿಸಿದೆ. ಹೀಗಾಗಿ ನೊಟೀಸ್ ದೊರೆತ 10 ದಿನಗಳ ಒಳಗೆ ವಿರೋಧಪಕ್ಷ ನಾಯಕನ ಆಯ್ಕೆ ಮಾಡಲು ಶಾಸಕಾಂಗ ಸಭೆ ಕರೆಯುವಂತೆ ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ನಿರ್ದೇಶಿಸಬೇಕು. ವಿಪಕ್ಷ ನಾಯಕನ ಆಯ್ಕೆಯನ್ನು ವಿಳಂಬ ಮಾಡಿರುವುದಕ್ಕೆ ಕರ್ನಾಟಕದ ಜನತೆಯ ಕ್ಷಮೆ ಕೋರಬೇಕು ಎಂದು ನೋಟಿಸ್‌ನಲ್ಲಿ ಆಗ್ರಹಿಸಲಾಗಿದೆ.
ಇದರೊಂದಿಗೆ ರಾಷ್ಟ್ರಪತಿ, ರಾಜ್ಯಪಾಲರು ಮತ್ತು ವಿಧಾನಸಭೆಯ ಸ್ಪೀಕರ್ ಅವರಿಗೂ ವಿಪಕ್ಷ ನಾಯಕನನ್ನು ನೇಮಿಸಲು ಬಿಜೆಪಿಗೆ ನಿರ್ದೇಶಿಸಬೇಕು ಎಂದು ಕೋರಿ ಅಮೃತೇಶ್ ಅವರು ಮನವಿ ಸಲ್ಲಿಸಿದ್ದಾರೆ.