ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ತಮ್ಮ ಫೋಟೊ ವೈರಲ್ ಆಗಿದ್ದರಿಂದ ಮನನೊಂದು ಯುವಕ ಮತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಟ್ಟಣದ ಕಲ್ಗುಣಿಗೆ ನಿವಾಸಿಗಳಾದ 28 ವರ್ಷದ ವಿವಾಹಿತೆ ಶೃತಿ ಮತ್ತು 20 ವರ್ಷದ ಮುರಳಿ ಮೃತ ದುರ್ದೈವಿಗಳು. ವಿವಾಹಿತ ಮಹಿಳೆ ಜೊತೆ ಯುವಕ ಸಲುಗೆಯಿಂದ ಇದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ಕಣ್ಣಿಗೆ ಬೀಳುತ್ತಿದ್ದಂತೆ ಮನನೊಂದ ಗೃಹಿಣಿ ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೃತಿ ಆತ್ಮಹತ್ಯೆ ಬೆನ್ನಲ್ಲೇ ಮುರಳಿ ಕೂಡ ನೇಣಿಗೆ ಶರಣಾಗಿದ್ದಾನೆ. ಮುರಳಿ, ತಾನು ಶೃತಿ ಜೊತೆ ಇದ್ದ ಫೋಟೋವನ್ನು ಅಪ್ಲೋಡ್ ಮಾಡಿ ಸ್ಟೇಟಸ್ನಲ್ಲಿ ಇಟ್ಟುಕೊಂಡಿದ್ದ. ಈ ಫೋಟೋ ವೈರಲ್ ಆಗಿದೆ. ಬಳಿಕ ಇದು ಶೃತಿ ಹಾಗೂ ಮುರಳಿ ಮನೆಯವರಿಗೂ ಮುಟ್ಟಿದೆ. ಇದೇ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಜಗಳವಗಿದೆ. ಇದರಿಂದ ಹೆದರಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರ ನಡುವೆ ಅನೈತಿಕ ಸಂಬಂಧವಿದೆಯೇ ಎಂಬುದು ತಿಳಿದಿಲ್ಲ. ಎರಡೂ ಕುಟುಂಬಗಳು ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಿಸಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.