ಅಯೋಧ್ಯೆ: ಅಯೋಧ್ಯೆ ರಾಮಲಲ್ಲಾನ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು ಹಲವು ಭಕ್ತರು ವಿವಿಧೆಡೆಗಳಿಂದ ಪ್ರಭು ಶ್ರೀ ರಾಮನಿಗೆ ವಿವಿಧ ರೀತಿಯ ಉಡುಗೊರೆಗಳನ್ನು ಕಳುಹಿಸುತ್ತಿದ್ದು ಈಗ ಅಲಿಢದಿಂದ 50 ಕೆಜಿ ಬೀಗ, ಶ್ರೀರಂಗಂನಿಂದ ಸೀರೆ, ಹೈದರಾಬಾದ್‌ನಿಂದ ಚಿನ್ನ ಹಾಗೂ ಬೆಳ್ಳಿ ಮಿಶ್ರಿತ ಪಾದುಕೆ ಅಯೋಧ್ಯೆ ತಲುಪಿದೆ.
ಬೀಗಗಳ ತಯಾರಿಕೆಗೆ ಖ್ಯಾತಿ ಪಡೆದಿರುವ ಅಲಿಗಢದ ಬೀಗ ತಯಾರಕರೊಬ್ಬರು ರಾಮ ಮಂದಿರಕ್ಕೆಂದೇ ವಿಶೇಷವಾದ 50 ಕೇಜಿ ತೂಕದ ಬೃಹತ್ ಬೀಗವನ್ನು ಸಿದ್ಧಪಡಿಸಿ ರಾಮ ಮಂದಿರಕ್ಕೆ ಅರ್ಪಿಸಿದ್ದಾರೆ. 6 ಜನ ಕಾರ್ಮಿಕರು ಸತತ 6 ತಿಂಗಳು ಕಾಲ ಸತತ ಪರಿಶ್ರಮ ಪಟ್ಟು ತಯಾರಿಸಿದ್ದಾರೆ. ಇದನ್ನು ರಾಮ ಮಂದಿರಕ್ಕೆ ಸಮರ್ಪಿಸಲಾಗಿದೆ.
ತಮಿಳುನಾಡಿನ ರಾಮಾಯಣ ಐತಿಹಾಸದ ಶ್ರೀರಂಗಂ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಗುಲದ ಪರವಾಗಿ ತರಹೇವಾರಿ ಸೀರೆಗಳು ಹಾಗೂ ಕುಪ್ಪುಸಗಳನ್ನು ಕಾಣಿಕೆಯಾಗಿ ನೀಡಿ, ಈ ಕಾಣಿಕೆಗಳನ್ನು ಅಯೋಧ್ಯೆಯ ರಾಮಮಂದಿರಕ್ಕೆ ತಲುಪಿಸುವಂತೆ ಕೋರಲಾಯಿತು. ಹೀಗಾಗಿ ಶ್ರೀರಂಗಂನ ಸೀರೆ ಅಯೋಧ್ಯೆಯ ಶ್ರೀರಾಮನ ಸಾನಿಧ್ಯ ತಲುಪಿದೆ.
ಹೈದರಾಬಾದ್ ಮೂಲದ ಚಲ್ಲ ಶ್ರೀನಿವಾಸ್ ಶಾಸ್ತ್ರಿ ಅವರು ಶ್ರೀರಾಮನಿಗೆ ಚಿನ್ನಲೇಪಿತ ಬೆಳ್ಳಿ ಪಾದುಕೆಗಳನ್ನು ದೇಣಿಗೆ ನೀಡಿದ್ದಾರೆ. ಪಾದುಕೆಗಳನ್ನು ಏಳು ಕೆಜಿ ಬೆಳ್ಳಿ ಮತ್ತು ಒಂದು ಕೆಜಿ ಚಿನ್ನದಿಂದ ನಿರ್ಮಿಸಲಾಗಿದೆ. ಚಲ್ಲ ಶ್ರೀನಿವಾಸ ಶಾಸ್ತ್ರಿ ಅವರು, ತಮಿಳುನಾಡಿನ ರಾಮೇಶ್ವರದಿಂದ ಪ್ರಾರಂಭಿಸಿ ಎರಡು ವರ್ಷಗಳ ಕಾಲ ದೇಶದ ಬಹುತೇಕ ಎಲ್ಲ ಹಿಂದೂ ಧಾರ್ಮಿಕಕೇಂದ್ರಗಳನ್ನು ಸಂದರ್ಶಿಸಿ ಅಯೋಧ್ಯೆಗೆ ತಲುಪಿದ್ದಾರೆ.