ಚಂಡೀಗಢ : ವಿಷಯುಕ್ತ ಮದ್ಯ ಸೇವಿಸಿ 19 ಮಂದಿ ಸಾವನ್ನಪ್ಪಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ಮುಖಂಡ ಹಾಗೂ ಜೆಜೆಪಿ ಪಕ್ಷದ ನಾಯಕನ ಪುತ್ರರನ್ನು ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಈ ದುರ್ಘಟನೆಯು ಯಮುನಾ ನಗರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದಿದೆ. ಘಟನೆ ಸಂಬಂಧಪಟ್ಟಂತೆ ಪೊಲೀಸರು ಕಾರ್ಖಾನೆಯೊಂದಕ್ಕೆ ದಾಳಿ ನಡೆಸಿದ್ದು, ಅಲ್ಲಿ ತಯಾರಿಸಿ ಇಡಲಾಗಿದ್ದ 200 ಕ್ರೇಟ್ ನಕಲಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಜೊತೆಗೆ 14 ಖಾಲಿ ಡ್ರಮ್‍ಗಳು ಮತ್ತು ಅಕ್ರಮ ಮದ್ಯ ತಯಾರಿಸಲು ಬಳಸಿದ್ದ ವಸ್ತುಗಳನ್ನು ಸಹ ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿರುವಂತಹ ಜನ ವಾಸಿಸುವ ಪ್ರದೇಶಗಳಿಗೆ ಇದೇ ಕಾರ್ಖಾನೆಯಲ್ಲಿ ತಯಾರಾದ ಮದ್ಯ ಸರಬರಾಜಾಗಿರುವುದು ಖಚಿತವಾಗಿದೆ.
ಈ ದುರ್ಘಟನೆ ಬಳಿಕ ಗ್ರಾಮಸ್ಥರು ಮದ್ಯ ದಂಧೆಕೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ರಾಜಕೀಯ ಪಕ್ಷಗಳು ಕೂಡ ಬೆಂಬಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇನ್ನು ಪ್ರಕರಣದ ತನಿಖೆಗಾಗಿ ಯಮುನಾನಗರ ಪೊಲೀಸರು ವಿಶೇಷ ತನಿಖಾ ತಂಡ ರಚಿಸಲಾಗಿದೆ.