ಬೆಂಗಳೂರು: ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಸ್ವಾಮೀಜಿಯ ಪತ್ತೆಗಾಗಿ ಎಲ್ಲೆಡೆ ಪೊಲೀಸರು ಹುಡುಕಾಟ ನಡೆಸಿದ್ದರು.
ಕೊನೆಗೆ ಪೊಲೀಸರಿಗೆ ಹಾಲಶ್ರೀ ಒಡಿಶಾದಲ್ಲಿರುವುದಾಗಿ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರ ತಂಡವೊಂದು ಕಟಕ್ ನ ಹೋಟೆಲಿಗೆ ಹೋಗಿ ನೋಡಿದಾಗ ಹಾಲಶ್ರೀ ಅಲ್ಲಿಂದ ಹೊರಟು ಹೋಗಿದ್ದರು. ಅವರು ರೈಲಿನಲ್ಲಿ ಪ್ರಯಾಣಿಸತ್ತಿರುವುದಾಗಿ ಗೊತ್ತಾದ ಪೊಲೀಸರಿಗೆ ಅದೇ ರೈಲನ್ನು ಹತ್ತಿಕೊಂಡ ಸೆ. 18ರ ರಾತ್ರಿ 9.30ರ ಸುಮಾರಿಗೆ ರೈಲಿನಲ್ಲೇ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಸ್ವಾಮೀಜಿಯವರ ಬಂಧನ ಈ ಪ್ರಕರಣಕ್ಕೆ ಹೊಸ ತಿರುವು ಕೊಡಬಹುದು ಎಂದು ನಿರೀಕ್ಷಿಸಲಾಗಿದೆ.
ಆದರೇ ಸ್ವಾಮೀಜಿಯವರನ್ನು ಹಿಡಿಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಯಾಕೆಂದರೆ ಹಾಲಶ್ರೀ ಸ್ವಾಮೀಜಿ ತಮ್ಮ ವೇಷವನ್ನು ಮರೆಸಿಕೊಂಡಿದ್ದರು. ತಮ್ಮ ನಿತ್ಯದ ಕಾವಿಯನ್ನು ತ್ಯಜಿಸಿ ಟೀ ಶರ್ಟ್, ಪ್ಯಾಂಟ್ ಧರಿಸುವ ಮೂಲಕ ಸಾಮಾನ್ಯರಂತೆ ಕಾಣುತ್ತಿದ್ದರು. ಅಲ್ಲದೆ, ಗಂಟೆಗೊಮ್ಮೆ ಸ್ಥಳ ಬದಲಾಯಿಸುತ್ತಿದ್ದರು. ಒಂದು ಊರಿಗೆ ಹೋಗಿ ಸುಮಾರು ಒಂದು ಗಂಟೆಯಾಗುತ್ತಲೇ ಅಲ್ಲಿಂದ ತಮ್ಮ ಮೊಬೈಲಿನ ಮೂಲಕ ಕೆಲವರನ್ನು ಸಂಪರ್ಕಿಸಿ ಅಲ್ಲಿಂದ ಬೇರೊಂದು ಊರಿಗೆ ಹೊರಟು ಹೋಗುತ್ತಿದ್ದರು. ಆ ಕ್ಷಣಕ್ಕೆ ಆ ಊರಿಗೆ ಹತ್ತಿರದಲ್ಲಿರುವ ಊರು ಯಾವುದೋ ಅಲ್ಲಿಗೆ ಬಸ್ಸು , ರೈಲಿನ ಮೂಲಕ ಪ್ರಯಾಣಿಸುತ್ತಿದ್ದರು ಅಭಿನವ ಹಾಲಶ್ರೀ ಸ್ವಾಮೀಜಿ.
ಪೊಲೀಸರು ಸ್ವಾಮೀಜಿಯವರ ಖಾಸಗಿ ಡ್ರೈವರ್ ಅನ್ನು ವಶಕ್ಕೆ ಪಡೆದು ಆತನ ವಿಚಾರಣೆ ನಡೆಸಿದ್ದರು. ಆಗ ಅವರಿಗೆ ಸ್ವಾಮೀಜಿ ಹೈದರಾಬಾದ್ ಕಡೆಗೆ ಹೋಗಿರುವುದು ತಿಳಿದುಬಂದಿತ್ತು. ಆದರೆ, ಅದಕ್ಕಿಂತ ಮುಖ್ಯವಾಗಿ ಅವರಿಗೆ ತಿಳಿದುಬಂದ ಮತ್ತೊಂದು ಸಂಗತಿಯೇನೆಂದರೆ, ಅದು ಸ್ವಾಮೀಜಿ ಬಳಸುತ್ತಿದ್ದ ಮೊಬೈಲ್ ಫೋನ್ ಗಳು. ಸ್ವಾಮೀಜಿಯವರು ವಿಜಯನಗರ ಜಿಲ್ಲೆಯಲ್ಲಿರುವ ತಮ್ಮ ಆಶ್ರಮದಿಂದ ಓಡಿಹೋಗುವ ಮುನ್ನ ನಾಲ್ಕು ಮೊಬೈಲ್ ಫೋನ್ ಗಳನ್ನು ಹಾಗೂ ಕೆಲವು ಸಿಮ್ ಕಾರ್ಡ್ ಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಅವುಗಳಲ್ಲಿ ಎರಡು ಮೊಬೈಲ್ ಗಳು ಹಾಗೂ ಎರಡು ಸಿಮ್ ಕಾರ್ಡ್ ಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದರು. ಮತ್ತೆರಡು ಮೊಬೈಲ್ ಹಾಗೂ ಸಿಮ್ ಕಾರ್ಡ್ ಗಳನ್ನು ತಮ್ಮ ಚಾಲಕ ನಿಂಗರಾಜುವಿಗೆ ಕೊಟ್ಟು ಸಂಪರ್ಕ ಮಾಡುವುದಾಗಿ ಹೇಳಿದ್ದರು.
ತಮ್ಮಲ್ಲಿದ್ದ ಮೊಬೈಲ್ ಗಳಿಗೆ ಹೊಸ ಸಿಮ್ ಗಳನ್ನು ಹಾಕಿಕೊಂಡು ಅವರು ಚಾಲಕ ನಿಂಗರಾಜು ಹಾಗೂ ತಮಗೆ ಬೇಕಾದರವರ ಬಳಿ ಮಾತನಾಡುತ್ತಿದ್ದರು. ಒಂದು ಊರಿಗೆ ಹೋಗಿ ಯಾರ‍್ಯಾರಿಗೋ ಫೋನ್ ಮಾಡುವುದು, ಆನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುವುದು, ಮುಂದಿನ ಊರಿಗೆ ಹೋದಾಗ ಅಲ್ಲಿ ಮೊಬೈಲ್ ಆನ್ ಮಾಡಿ ಕೆಲವರಿಗೆ ಫೋನ್ ಮಾಡುವುದು ಪುನಃ ಸ್ವಿಚ್ ಆಫ್ ಮಾಡುವುದು ಮಾಡುತ್ತಿದ್ದರು.
ಜೊತೆಗೆ, ಒಂದೊಂದು ಊರುಗಳಲ್ಲಿಯೂ ಒಂದೊಂದು ಫೋನ್ ಹಾಗೂ ಒಂದೊಂದು ಸಿಮ್ ಕಾರ್ಡ್ ಗಳನ್ನು ಬಳಸಿ ಫೋನ್ ಮಾಡುವುದು. ಹೀಗೆ ದಿನದೂಡುತ್ತಿದ್ದ ಸ್ವಾಮೀಜಿಗೆ ಮೊಬೈಲ್ ಬಳಸುವುದರಿಂದ ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ. ಒಂದಲ್ಲಾ ಒಂದು ದಿನ ತಾನು ಸಿಕ್ಕಿ ಹಾಕಿಕೊಳ್ಳುವುದು ಖಚಿತ ಎಂದ ಅವರು, ಅಲ್ಲಿಯವರೆಗೂ ಸಾಧ್ಯವಾದಷ್ಟೂ ಬಚಾವಾಗಲು ಪ್ರಯತ್ನಿಸಿದ್ದರು ಎನ್ನಲಾಗುತ್ತಿದೆ.